ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ನಡೆದ ದಾಳಿಯಲ್ಲಿ 450 ಪ್ರಯಾಣಿಕರಲ್ಲಿ 155 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ ಮತ್ತು 27 ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಭದ್ರತಾ ಪಡೆಗಳು ಬುಧವಾರ ತಿಳಿಸಿವೆ.

ಕರಾಚಿ (ಮಾ.12): ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಹೈಜಾಕ್ ಆದ ರೈಲಿನಲ್ಲಿ ಇನ್ನೂ ಅನೇಕ ಜನರು ಒತ್ತೆಯಾಳುಗಳಾಗಿದ್ದಾರೆ. ರೈಲು ಹೈಜಾಕ್ ಆಗಿ 24 ಗಂಟೆಗಳಿಗಿಂತ ಹೆಚ್ಚು ಸಮಯವಾಗಿದೆ ಮತ್ತು ಒತ್ತೆಯಾಳುಗಳನ್ನು ರಕ್ಷಿಸಲು ಪಾಕಿಸ್ತಾನದ ಭದ್ರತಾ ಪಡೆಗಳ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಬಲೂಚಿಸ್ತಾನ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಕಾರ್ಯಾಚರಣೆಯಲ್ಲಿನ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ 155 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ 27 ಬಂಡುಕೋರರನ್ನು ಹತ್ಯೆ ಮಾಡಲಾಗಿದೆ.

ಇಲ್ಲಿಯವರೆಗೆ 155 ಒತ್ತೆಯಾಳುಗಳ ರಕ್ಷಣೆ: ಈಗ ಬಂದಿರುವ ಮಾಹಿತಿಯ ಪ್ರಕಾರ, 155 ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಮತ್ತು ಪಾಕಿಸ್ತಾನ ಮಿಲಿಟರಿ ಪಡೆಗಳ ಕ್ರಮದಲ್ಲಿ 27 ಬಂಡುಕೋರರು ಹತರಾಗಿದ್ದಾರೆ. ಆದರೂ, ಮಾಧ್ಯಮ ವರದಿಗಳ ಪ್ರಕಾರ, ಹೈಜಾಕ್ ಮಾಡಲಾದ ರೈಲಿನಿಂದ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ, ಅದರಲ್ಲಿ 104 ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ಪಾಕಿಸ್ತಾನದ ಪ್ರಧಾನಮಂತ್ರಿ ಹೇಳಿದ್ದೇನು: ಈ ಮಧ್ಯೆ, ಬಲೂಚಿಸ್ತಾನ ರೈಲು ಹೈಜಾಕ್ ಘಟನೆ ಬಗ್ಗೆ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿದ್ದಾರೆ. ಅವರು, “ಕಾರ್ಯಾಚರಣೆ ಯಶಸ್ವಿಯಾಗಲಿದೆ, ನಾವು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುತ್ತೇವೆ” ಎಂದಿದ್ದಾರೆ. ಸುದ್ದಿ ಸಂಸ್ಥೆ IANSನಿಂದ ಪಡೆದ ಮಾಹಿತಿಯ ಪ್ರಕಾರ, ಈ ಘಟನೆಯಲ್ಲಿ 16 ಭಯೋತ್ಪಾದಕರು ಹತರಾಗಿದ್ದಾರೆ ಎಂದು ವರದಿಯಾಗಿದೆ, ಆದರೆ ಅಧಿಕೃತ ಅಂಕಿಅಂಶಗಳಲ್ಲಿ ಈ ಸಂಖ್ಯೆ ಇನ್ನೂ 13 ಎಂದು ಹೇಳಲಾಗುತ್ತಿದೆ.