ಮಂಗಳೂರಿನ ಪರಂಗಿಪೇಟೆಯಲ್ಲಿ ಇತ್ತಿಚೆಗೆ ನಾಪತ್ತೆಯಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಪ್ರಕರಣವನ್ನು ಮುಂದಿಟ್ಟು ಕೋಮು ಸಂಘರ್ಷಕ್ಕೆ ಯತ್ನಿಸಿದ ಬಿಜೆಪಿ ಶಾಸಕರುಗಳಾದ ಭರತ್ ಶೆಟ್ಟಿ, ಹರೀಶ್ ಪೂಂಜಾ ಸಹಿತ ಬಿಜೆಪಿಯ ಸಹ ಸಂಘಟನೆಗಳ ದುಷ್ಕರ್ಮಿಗಳ ವಿರುದ್ಧ ಸ್ವಯಂ ಪ್ರೇರಿತ ಮೊಕದ್ದಮೆ ಹೂಡಿ ಕಾನೂನು ಪ್ರಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ‘ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ’ಯ ನಿಯೋಗ ಜಿಲ್ಲಾ ಎಸ್ಪಿ ಅವರನ್ನು ಭೇಟಿ ಮಾಡಿ ಸೋಮವಾರ ಒತ್ತಾಯಿಸಿದೆ. ಮಂಗಳೂರು

ಫೆಬ್ರವರಿ 25 ರಂದು ಸಂಜೆ 7 ಗಂಟೆಗೆ ಕಾಣೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ, ದ್ವಿತೀಯ ಪಿಯು ವಿದ್ಯಾರ್ಥಿ ದಿಗಂತ್ ಕೊನೆಗೂ ಶನಿವಾರ ಮಾರ್ಚ್ 8 ರಂದು ಸುರಕ್ಷಿತವಾಗಿ ಪತ್ತೆಯಾಗಿದ್ದರು. ಅವರ ನಿಗೂಢ ನಾಪತ್ತೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈ ವೇಳೆ ಫರಂಗಿಪೇಟೆಯ ಅಂಗಡಿ ಮುಂಗಟ್ಟನ್ನು ಬಂದ್ ಮಾಡಬೇಕೆಂದು ಬಿಜೆಪಿ ಪರ ಸಂಘಟನೆಗಳು ಕರೆ ಕೊಟ್ಟಿದ್ದವು. ಪಟ್ಟಣದ ಎಲ್ಲರೂ ಜಾತಿ ಧರ್ಮವೆನ್ನದೆ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದ್ದರು.

ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ನಾಪತ್ತೆ ಪ್ರಕರಣ ಸದನದಲ್ಲೂ ಸದ್ದು ಮಾಡಿತ್ತು. ಸಂಘ ಪರಿವಾರದ ಸಂಘಟನೆಗಳು ಹಾಗೂ ಬಿಜೆಪಿ ನಾಪತ್ತೆ ಪ್ರಕರಣಕ್ಕೆ ಹಿಂದೂ ಮುಸ್ಲಿಂ ಬಣ್ಣ ಹಚ್ಚಲು ಗರಿಷ್ಠ ಪ್ರಯತ್ನ ಮಾಡಿದ್ದವು. ಫರಂಗಿಪೇಟೆ ಮುಸ್ಲಿಂ ಬಾಹುಳ್ಯದ ಪ್ರದೇಶ ಎಂಬ ಕಾರಣಕ್ಕೆ ದಿಗಂತ್ ನಾಪತ್ತೆ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲು ಹಾಗೂ ಇಡೀ ಊರಿಗೆ ಕ್ರಿಮಿನಲ್ ಹಣೆಪಟ್ಟಿ ಕಟ್ಟಲು ಬಿಜೆಪಿ ಮತ್ತು ಅದರ ಸಂಘಟನೆಗಳ ದುಷ್ಕರ್ಮಿಗಳು ಮುಂದಾಗಿದ್ದರು. ದ್ವೆಷ ಭಾಷಣದ ಜೊತೆಗೆ ಮುಸ್ಲಿಮರು ಹೆಚ್ಚಾಗಿ ಇರುವ ಪ್ರದೇಶವನ್ನು ತಪ್ಪಾಗಿ ಮತ್ತು ಭಯ ಹುಟ್ಟಿಸುವ ಎಲ್ಲಾ ಪ್ರಪೊಗಾಂಡವನ್ನು ಬಿಜೆಪಿ ಮಾಡಿತ್ತು.

ಈ ನಡುವೆ ನಾಪತ್ತೆಯಾಗಿದ್ದ ಬಾಲಕ ಉಡುಪಿಯಲ್ಲಿ ಪತ್ತೆಯಾಗಿದ್ದು, ದ್ವಿತೀಯ ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋಗಿದ್ದಾಗಿ ಪೋಲಿಸರು ತಿಳಿಸಿದ್ದಾರೆ. ಫರಂಗಿಪೇಟೆಯಿಂದ ತೆರಳಿದ್ದ ಬಾಲಕ ಶಿವಮೊಗ್ಗ, ಮೈಸೂರು, ಕೆಂಗೇರಿ, ನಂದಿಬೆಟ್ಟ ಸುತ್ತಿ ಉಡುಪಿಗೆ ತೆರಳಿದ್ದರು. ಅಲ್ಲಿ ಬಟ್ಟೆ ಖರೀದಿ ವೇಳೆ ಪತ್ತೆಯಾಗಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದ್ದಾರೆ. ಸದ್ಯಕ್ಕೆ ಅವರನ್ನು ಬಾಲಮಂದಿರಕ್ಕೆ ಸೇರಿಸಲಾಗಿದೆ ಎಂದು ವರದಿಯಾಗಿದೆ.

ಮಾರ್ಚ್ 12ರಂದು ಅವರನ್ನು ಹೈಕೋರ್ಟ್ ಹಾಜರುಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದ್ದಾರೆ. ಅವರ ಹೆತ್ತವರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರಿಂದ ಕೋರ್ಟ್ ಮುಂದೆ ಹಾಜರುಪಡಿಸಿ, ಕೋರ್ಟ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

“ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ” ನಿಯೋಗದಲ್ಲಿ ವೇದಿಕೆಯ ಸಂಚಾಲಕ, ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ರಾಜ್ಯ ವಕ್ತಾರ ಎಮ್ ಜಿ ಹೆಗ್ಡೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್ ಬಿ, ಆಮ್ ಆದ್ಮಿಯ ಎಸ್ ಎಲ್ ಪಿಂಟೊ, ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮಾಜಿ ಮೇಯರ್ ಕೆ ಅಶ್ರಫ್, ಕರ್ನಾಟಕ ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ ಇದ್ದರು.
ಜೊತೆಗೆ ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಎಐಟಿಯುಸಿ ಮುಂದಾಳು ಎಚ್ ವಿ ರಾವ್, ಕಾರ್ಮಿಕ ಮುಂದಾಳುಗಳಾದ ವಿ ಕುಕ್ಯಾನ್, ಸೀತಾರಾಮ ಬೇರಿಂಜೆ, ಡಿವೈಎಫ್ಐ ನ ಬಿ ಕೆ ಇಮ್ತಿಯಾಝ್, ಸಂತೋಷ್ ಬಜಾಲ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಶೆಟ್ಟಿ, ಪ್ರಮೀಳಾ ಕೆ, ಎಸ್ಎಫ್ಐ ನ ವಿನುಷ ರಮಣ, ಸಮುದಾಯ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು, ವಿವಿಧ ಸಂಘಟನೆಗಳ ಮುಂದಾಳುಗಳಾದ ಸರೋಜಿನಿ ಬಂಟ್ವಾಳ, ಕರುಣಾಕರ ಮಾರಿಪಳ್ಳ, ಸಮರ್ಥ್ ಭಟ್, ನೀತ್ ಶರಣ್, ರಾಜೇಶ್ ದೇವಾಡಿಗಾ ಮುಂತಾದವರು ಉಪಸ್ಥಿತರಿದ್ದರು.