ಮೊಬೈಲ್ಗೆ ಯಾವ ರೀತಿ ಹಣ ಭರಿಸುತ್ತೇವೋ ಅದೇ ರೀತಿ ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಮಾದರಿಯಲ್ಲಿ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ ಆಗುತ್ತದೆ.
ದಾವಣಗೆರೆ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸೇರಿದಂತೆ ಆಯಾಯ ವಿದ್ಯುತ್ ಕಂಪನಿಗಳು ಇದೀಗ ಹೊಸ ಡಿಜಿಟಲ್ ವಿದ್ಯುತ್ ಮೀಟರ್ ಜಾರಿ ಮಾಡಲು ಮುಂದಾಗಿವೆ. ಈ ಮೀಟರ್ ಹಳೇ ಮೀಟರ್ಗಿಂತ ಸ್ವಲ್ಪ ಡಿಫರೆಂಟ್ ಎಂಬಂತೆ ಹಣ ಭರಿಸಿದ್ರೆ ಮಾತ್ರ ಜನರಿಗೆ ವಿದ್ಯುತ್ ಲಭ್ಯವಾಗಲಿದೆ.

ಮೊಬೈಲ್ಗೆ ಯಾವ ರೀತಿ ಹಣ ಭರಿಸುತ್ತೇವೋ ಅದೇ ರೀತಿ ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಮಾದರಿಯಲ್ಲಿ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ ಆಗಲಿದೆ. ಈಗಾಗಲೇ ಡಿಜಿಟಲ್ ಮೀಟರ್ಗಳು ದಾವಣಗೆರೆ ಬೆಸ್ಕಾಂ ಅಧಿಕಾರಿಗಳ ಕೈಸೇರಿವೆ.
ಹೌದು, ರಾಜ್ಯದ ಎಲ್ಲಾ ಎಸ್ಕಾಂಗಳಲ್ಲಿ ಯಾವುದೇ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಬಂದರೂ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಕೆಇಆರ್ಸಿಯ ಸೂಚನೆ ಬಂದಿದೆ. ಹಾಲಿ ಇರುವ ಹಳೆಯ ಮೀಟರ್ ತೆಗೆದು ಸ್ಮಾರ್ಟ್ ಮೀಟರ್ ಅಳವಡಿಸಲು ಹಂತ ಹಂತವಾಗಿ ದಾವಣಗೆರೆ ಬೆಸ್ಕಾಂ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆದರೆ, ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಬಡ ಜನರು ಕೊಂಚ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಫೆ.15ರಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭ ಆಗಿದ್ದು, ಇಲ್ಲಿತನಕ ದಾವಣಗೆರೆಯಲ್ಲಿ ಯಾವೊಬ್ಬರೂ ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಸ್ಮಾರ್ಟ್ ಮೀಟರ್ ದರ ಹೇಗಿದೆ?: ಸ್ಮಾರ್ಟ್ ಮೀಟರ್ಗಳ ಬೆಲೆ ದುಬಾರಿ ಇದೆ. ಸಿಂಗಲ್ ಫೇಸ್ ಮೀಟರ್ ಬೆಲೆ 4,998 ರೂ., ಮೂರು ಫೇಸ್ ಮೀಟರ್ ಬೆಲೆ 8870 ರೂ. ಹಾಗು ಎಲ್ಟಿ ಸಿಟಿ ಮೂರು ಫೇಸ್ ಮೀಟರ್ ಬೆಲೆ 28,080 ರೂ. ಇರಲಿದೆ. 100 ರೂ.ನಿಂದ ಆರಂಭ ಆಗುವ ಮೀಟರ್ಗಳ ಬೆಲೆ 5 ಸಾವಿರ ರೂ. ವರೆಗೆ ಇರುತ್ತದೆ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಹಣ ಭರಿಸಿದ್ರೇ ಮಾತ್ರ ವಿದ್ಯುತ್, ಹಣ ಇಲ್ಲದಿದ್ರೇ ವಿದ್ಯುತ್ ಕಡಿತ: ಹೊಸ ಮೀಟರ್ ಅಳವಡಿಕೆ ಬಳಿಕ ನಿಮಗೆ ಎಷ್ಟು ಯುನಿಟ್ ವಿದ್ಯುತ್ ಬೇಕೆಂಬುದರ ಆಧಾರದಲ್ಲಿ ಸ್ಮಾರ್ಟ್ ಮೀಟರ್ ಚಾರ್ಜ್ ಮಾಡಿಸಿಕೊಳ್ಳಬೇಕು. ನೀವು ಹಾಕಿಕೊಂಡ ಕರೆನ್ಸಿ ಆಧಾರದಲ್ಲಿ ವಿದ್ಯುತ್ ಪೂರೈಕೆ ಆಗಲಿದೆ. ಇನ್ನು ಪೋಸ್ಟ್ ಪೇಯ್ಡ್ ವಿಷಯ ಬಂದರೆ ತಿಂಗಳುಪೂರ್ತಿ ನೀವು ಬಳಸಿದ ಯುನಿಟ್ ಆಧಾರದಲ್ಲಿ ಬಿಲ್ ಬರಲಿದೆ. ಬಿಲ್ ಬಂದ 7 ದಿನದ ಒಳಗೆ ಹಣ ಪಾವತಿ ಮಾಡಬೇಕು. ನಿಗದಿತ ಅವಧಿಯಲ್ಲಿ ಬಿಲ್ ಪಾವತಿ ಆಗದೇ ಇದ್ದರೆ ಸ್ಮಾರ್ಟ್ ಮೀಟರ್ ವಿದ್ಯುತ್ ಪೂರೈಕೆ ನಿಲ್ಲಿಸುತ್ತದೆ.

ಖಾಸಗಿ ಸಭೆ ಸಮಾರಂಭಗಳಿಗೆ ವಿದ್ಯುತ್ ಸಂಪರ್ಕ ದುಬಾರಿ: ಇನ್ನು ಗಣೇಶ ಹಬ್ಬ, ನಾಟಕ, ರಾಜಕೀಯ ಸಮಾವೇಶ ಹೀಗೆ ಖಾಸಗಿ ಸಭೆ ಸಮಾರಂಭಗಳಿಗೆ ತೆಗೆದುಕೊಳ್ಳುವ ತಾತ್ಕಾಲಿಕ ವಿದ್ಯುತ್ ಸಂಪರ್ಕ ಇನ್ನು ಮುಂದೆ ಬಲು ದುಬಾರಿ ಆಗಲಿದೆ. ಮೊದಲೆಲ್ಲಾ ಗರಿಷ್ಠ ಅಂದರೆ 5 ಸಾವಿರ ರೂ.ಗೆ ಎಲ್ಲವೂ ಮುಗಿದುಹೋಗುತ್ತಿತ್ತು. ಆದರೆ, ಇನ್ನು ಮುಂದೆ ಖಾಸಗಿಯಾಗಿ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಕನಿಷ್ಠ 7-8 ಸಾವಿರ ರೂ. ವೆಚ್ಚ ಆಗಲಿದೆ ಎಂದು ಊಹಿಸಲಾಗಿದೆ. ಬಳಕೆ ಮಾಡುವ ವಿದ್ಯುತ್ ಯುನಿಟ್ ಆಧಾರದಲ್ಲಿ ವಾಣಿಜ್ಯ ಬೆಲೆಯಲ್ಲಿ ಮೊದಲೇ ಹಣ ಪಾವತಿಸಬೇಕೆಂಬುದು ಬೆಸ್ಕಾಂ ಅಧಿಕಾರಿಗಳ ವಾದ ಆಗಿದೆ.

ಯುಪಿಐ ಮೂಲಕ ಭರಿಸಬಹುದು: ವಿದ್ಯುತ್ ಬೇಕಾದವರು ಯುಪಿಐ ಮೂಲಕ, ಇಲ್ಲ ಬೆಸ್ಕಾಂ ಆ್ಯಪ್ ಮೂಲಕ ರಿಚಾರ್ಜ್ ಮಾಡಬಹುದಾಗಿದೆ. ಫೆ.15 ರ ನಂತರ ಬರುತ್ತಿರುವ ಅರ್ಜಿಗಳಿಗೆ ನೂತನ ಸ್ಮಾರ್ಟ್ ಮೀಟರ್ ಕೊಡಲಾಗುತ್ತಿದೆ. ಮೊಬೈಲ್ಗೆ ಪ್ರೀಪೇಯ್ಡ್, ಪೋಸ್ಟ್ ಪೇಯ್ಡ್ ರೀತಿ ಮೊತ್ತ ಭರಿಸಿದಂತೆ ಈ ಮೀಟರ್ಗಳಿಗೆ ಹಣ ಭರಿಸಿದ್ರೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಹಣ ಭರಿಸಿದ್ರೆ ಮಾತ್ರ ವಿದ್ಯುತ್ ದೊರೆಯಲಿದೆ. ಹಣ ಖಾಲಿಯಾದರೆ ವಿದ್ಯುತ್ ಕಡಿತ ಆಗಲಿದೆ” ಎಂದು ತಿಪ್ಪೇಸ್ವಾಮಿ ತಿಳಿಸಿದರು.

ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಸಂದೇಶ: “ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ನಿಮ್ಮ ಖಾತೆಯಲ್ಲಿ ಎಷ್ಟು ಮೊತ್ತ ಇದೆ. ಎಷ್ಟು ಕಡಿತ ಆಗಿದೆ. ಎಷ್ಟು ಯುನಿಟ್ ವಿದ್ಯುತ್ ಖರ್ಚಾಗಿದೆ. ಬ್ಯಾಲೆನ್ಸ್ ಎಷ್ಟಿದೆ ಎಂದು ಸಂದೇಶ ಮೊಬೈಲ್ಗೆ ಬರಲಿದೆ. ರಾತ್ರಿ ಹಣ ಖಾಲಿ ಅದರೆ ವಿದ್ಯುತ್ ಕಡಿತ ಆಗಲ್ಲ, ಬೆಳಗ್ಗೆ ಹಣ ಭರಿಸಿದ್ರೆ ಮತ್ತೆ ವಿದ್ಯುತ್ ಚಾಲ್ತಿಯಾಗಲಿದೆ. ದಾವಣಗೆರೆಯ ಬೆಸ್ಕಾಂ ಕಚೇರಿಯಲ್ಲಿ ಈ ಡಿಜಿಟಲ್ ಮೀಟರ್ ದೊರೆಯಲಿದೆ. ಹಳೇ ಮೀಟರ್ಗಳಿಗೆ ಇದು ಅನ್ವಯ ಆಗಲ್ಲ, ಹೊಸದಾಗಿ ಮೀಟರ್ ಬೇಕೆಂದು ಅರ್ಜಿ ಸಲ್ಲಿಸುವವರಿಗೆ ಈ ಮೀಟರ್ ದೊರೆಯಲಿದೆ. ಹಂತ ಹಂತವಾಗಿ ಹಳೇ ಮೀಟರ್ಗಳಿಗೂ ಅನ್ವಯ ಮಾಡಲಾಗುವುದು, ಮೀಟರ್ಗೆ ಮಿನಿಮಮ್ 100 ರೂಪಾಯಿ ಭರಿಸಬೇಕಾಗುತ್ತದೆ” ಎಂದರು.
ಜನಸಾಮಾನ್ಯರು ಹೇಳುವುದೇನು?: “ಸ್ಮಾರ್ಟ್ ಮೀಟರ್ಗಳು ಬಂದಿವೆ, ಹೊಸದಾಗಿ ಅರ್ಜಿ ಕೊಡುವವರಿಗೆ ಇದು ಅನ್ವಯ ಆಗಲಿದೆ. ಬೆಸ್ಕಾಂ ಅವರು ಮೊದಲು ಸರ್ಕಾರಿ ಕಚೇರಿ, ಕಟ್ಟಡಗಳಿಗೆ, ಕಮರ್ಷಿಯಲ್ ಕಟ್ಟಡಗಳಿಗೆ ವಿದ್ಯುತ್ ಮೀಟರ್ ಅಳವಡಿಸಬೇಕಿತ್ತು. ಮೂರು ಸಾವಿರ ಇದ್ದ ಮೀಟರ್ ಬೆಲೆ ಐದು ಸಾವಿರ ಆಗಿದೆ. ಐದು ಸಾವಿರ ಇದ್ದ ಮೀಟರ್ ಎಂಟು ಸಾವಿರ ಆಗಿದೆ. ಬೆಸ್ಕಾಂ ಅವರು ಬಡವರಿಗೆ ದರ ಕಡಿಮೆ ಮಾಡುವ ಯೋಚನೆ ಮಾಡಬೇಕು. ಇಷ್ಟು ದಿನ ತಿಂಗಳಿಗೊಮ್ಮೆ ಬಿಲ್ ಸಂದಾಯ ಮಾಡುತ್ತಿದ್ದರು. ಇದೀಗ ಎಷ್ಟು ಹಣ ಭರಿಸುತ್ತಾರೋ ಅಷ್ಟು ವಿದ್ಯುತ್ ಸಂದಾಯ ಆಗಲಿದೆ. ಹಣ ಖಾಲಿ ಅದರೆ ವಿದ್ಯುತ್ ಕಡಿತ ಆಗಲಿದೆ. ವಿದ್ಯುತ್ ರಾತ್ರಿ ಏಕಾಏಕಿ ಕಡಿತ ಆಗದೆ ಇರುವುದು ಖುಷಿ ಸಂಗತಿ” ಎಂದು ಸ್ಥಳೀಯ ಗಿರೀಶ್ ದೇವರಮನೆ ತಿಳಿಸಿದರು.