ಸುಡಾನ್‌ನ ವಾಡಿ ಸೈದ್ನಾ ವಾಯುನೆಲೆಯ ಬಳಿಯ ಜನವಸತಿ ಪ್ರದೇಶದಲ್ಲಿ ಮಂಗಳವಾರ (ಫೆ.25) ರಾತ್ರಿ ಮಿಲಿಟರಿ ವಿಮಾನವೊಂದು ಪತನಗೊಂಡಿದ್ದು, 46 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ರಾಜಧಾನಿ ಖಾರ್ಟೌಮ್‌ನ ವಾಯುವ್ಯದಲ್ಲಿರುವ ಓಮ್‌ದುರ್ಮನ್‌ನಲ್ಲಿರುವ ಈ ನೆಲೆಯು ಸೇನೆಯ ಅತಿದೊಡ್ಡ ಮಿಲಿಟರಿ ಕೇಂದ್ರಗಳಲ್ಲಿ ಒಂದಾಗಿದೆ.
ಸುಡಾನ್‌ನ ಮಿಲಿಟರಿ ಬೆಂಬಲಿತ ಸರ್ಕಾರದ ಪ್ರಧಾನ ಕೇಂದ್ರವಾದ ಪೋರ್ಟ್ ಸುಡಾನ್‌ನ ಕೆಂಪು ಸಮುದ್ರ ನಗರಕ್ಕೆ ವಿಮಾನ ತೆರಳುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಎಫ್‌ಪಿ ತಿಳಿಸಿದೆ. ವಿಮಾನವು ಉನ್ನತ ಶ್ರೇಣಿಯ ಮಿಲಿಟರಿ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿತ್ತು ಎಂಬ ವರದಿಗಳನ್ನು ಸೇನೆ ದೃಢಪಡಿಸಿಲ್ಲ ಮತ್ತು ನಿರಾಕರಿಸಿಲ್ಲ.

“ಅಂತಿಮ ಪರಿಶೀಲನೆಯ ಬಳಿಕ ಮೃತರ ಸಂಖ್ಯೆ 46ಕ್ಕೆ ತಲುಪಿದ್ದು, 10 ಮಂದಿ ಗಾಯಗೊಂಡಿದ್ದಾರೆ” ಎಂದು ಖಾರ್ಟೌಮ್ ಪ್ರಾದೇಶಿಕ ಸರ್ಕಾರದ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಮಕ್ಕಳು ಸೇರಿದಂತೆ ಗಾಯಗೊಂಡ ನಾಗರಿಕರನ್ನು ತುರ್ತು ರಕ್ಷಣಾ ಸಿಬ್ಬಂದಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸೇನೆಯೊಂದಿಗೆ ಸಂಯೋಜಿತ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ತಾಂತ್ರಿಕ ದೋಷದಿಂದಾಗಿ ಸೇನಾ ಸಾರಿಗೆ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸೇನಾ ಮೂಲವೊಂದು ತಿಳಿಸಿದ್ದಾಗಿ ಎಎಫ್‌ಪಿ ಹೇಳಿದೆ.
ವಿಮಾನ ಪತನದ ನಂತರ ದೊಡ್ಡ ಸ್ಫೋಟದ ಶಬ್ದ ಕೇಳಿ ಬಂತು, ದಟ್ಟ ಹೊಗೆ ಆವರಿಸಿತ್ತು. ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ದುರಂತ ಸ್ಥಳದ ನಿವಾಸಿಗಳು ವಿವರಿಸಿದ್ದಾರೆ. ಅವಘಡದಿಂದ ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸುಡಾನ್ ಅಂತರ್ಯುದ್ಧ
ಸೇನೆ ಮತ್ತು ಅರೆಸೈನಿಕ ಗುಂಪು ರಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ನಡುವಿನ ಅಂತರ್ಯುದ್ಧದಿಂದ ಸುಡಾನ್ ಈಗಾಗಲೇ ನಲುಗಿ ಹೋಗಿದೆ. ಇಬ್ಬರ ನಡುವಿನ ಕಿತ್ತಾಟ 2023ರಲ್ಲಿ ಪೂರ್ಣ ಪ್ರಮಾಣದ ಹೋರಾಟದ ಸ್ವರೂಪ ಪಡೆದಿತ್ತು.

ಪಶ್ಚಿಮ ಡಾರ್ಫರ್ ಪ್ರದೇಶದ ಹೆಚ್ಚಿನ ಪ್ರದೇಶಗಳನ್ನು ತನ್ನ ನಿಯಂತ್ರನದಲ್ಲಿಟ್ಟುಕೊಂಡಿರುವ ಆರ್‌ಎಸ್‌ಎಫ್, ಸೋಮವಾರ ನ್ಯಾಲಾ ನಗರದಲ್ಲಿ ಮಿಲಿಟರಿ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ.
ಸೇನೆ ಮತ್ತು ಆರ್‌ಎಸ್‌ಎಫ್ ನಡುವಿನ ಕಾದಾಟ, ಸುಡಾನ್‌ನ ನಗರ ಪ್ರದೇಶಗಳನ್ನು ಹಾನಿಗೊಳಿಸಿದೆ. ಅತ್ಯಾಚಾರ ಮತ್ತು ಜನಾಂಗೀಯ ಪ್ರೇರಿತ ಹತ್ಯೆಗಳು ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳಿಗೆ ಸಾಕ್ಷಿಯಾಗಿದೆ. ವಿಶ್ವಸಂಸ್ಥೆಯಿಂದ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳು ಎಂದು ಪರಿಗಣಿಸಲ್ಪಟ್ಟಿದೆ.