ಚುನಾವಣೆಯಲ್ಲಿ ಸೋತು ಮಾಜಿಯಾಗುವ ಶಾಸಕರು ಹಾಗೂ ಸಂಸದರಿಗೆ ಪಿಂಚಣಿ ವ್ಯವಸ್ಥೆ ಇದೆ. ಪ್ರತಿ ತಿಂಗಳು ಅವರು ಎಷ್ಟು ಪಿಂಚಣಿ ಪಡೀತಾರೆ, ಯಾವೆಲ್ಲ ಸೌಲಭ್ಯ ಸಿಗುತ್ತೆ ಅನ್ನೋದು ನಿಮಗೆ ಗೊತ್ತಾ?

ಸದ್ಯ ದೆಹಲಿ ವಿಧಾನಸಭೆ ಚುನಾವಣೆ (Delhi Assembly Election) ನಡೆದಿದೆ. ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ರೆ ಆಮ್ ಆದ್ಮಿ ಪಕ್ಷ 22 ಸೀಟ್ ಗೆ ತೃಪ್ತಿಪಟ್ಕೊಳ್ಬೇಕಾಗಿದೆ. ಇಲ್ಲಿ ಅನೇಕರು ಮೂರ್ನಾಲ್ಕು ಬಾರಿ ಚುನಾವಣೆಗೆ ನಿಂತು, ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಸಕ (MLA)ರಿಗೆ ಪಿಂಚಣಿ (Pension) ಸಿಗುತ್ತೆ ಎನ್ನುವ ವಿಷ್ಯ ಅನೇಕರಿಗೆ ಗೊತ್ತು. ಆದ್ರೆ ಐದಾರು ಬಾರಿ ಶಾಸಕರಾದ್ರೆ ಐದು ಪಿಂಚಣಿ ಸಿಗುತ್ತಾ? ಇಲ್ಲಿ ಪಿಂಚಣಿಯನ್ನು ಹೇಗೆ ಲೆಕ್ಕ ಹಾಕ್ತಾರೆ? ಸಂಸದ (MP)ರು ಹಾಗೂ ಶಾಸಕರ ಪಿಂಚಣಿ ಎಷ್ಟು ಎಂಬ ಬಗ್ಗೆ ಫುಲ್ ಡಿಟೇಲ್ ಇಲ್ಲಿದೆ.

ಶಾಸಕರಿಗೆ ಸಿಗುತ್ತೆ ಇಷ್ಟು ಪಿಂಚಣಿ : ಶಾಸಕರ ಪಿಂಚಣಿ ಪ್ರತಿಯೊಂದು ರಾಜ್ಯಕ್ಕೂ ಭಿನ್ನವಾಗಿದೆ. ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ ತಿದ್ದುಪಡಿ ಮಸೂದೆ 2022ಕ್ಕೆ ಒಪ್ಪಿಗೆ ಸಿಕ್ಕ ಮೇಲೆ ಶಾಸಕರು ಹಾಗೂ ಸಚಿವರ ವೇತನ ಶೇಕಡಾ 50ರಷ್ಟು ಹೆಚ್ಚಾಗಿದೆ. ಹಾಗೆಯೇ ಪಿಂಚಣಿಯನ್ನು ಹೆಚ್ಚು ಮಾಡಲಾಗಿದೆ. ತಿದ್ದುಪಡಿ ನಂತ್ರ ಮಾಜಿ ಶಾಸಕರಿಗೆ 40 ಸಾವಿರ ರೂಪಾಯಿ ಪಿಂಚಣಿ ಸಿಗ್ತಿದೆ. ಶಾಸಕರ ಅವಧಿ ಹೆಚ್ಚಾದಂತೆ ಒಂದು ಸಾವಿರ ರೂಪಾಯಿ ಪಿಂಚಣಿಯಲ್ಲಿ ಹೆಚ್ಚಳವಾಗುತ್ತದೆ. ಇದಲ್ಲದೆ ಅವರು ವೈದ್ಯಕೀಯ ಭತ್ಯೆ, ಪ್ರಯಾಣ ಭತ್ಯೆ ಸೇರಿದಂತೆ ಕೆಲ ಸೌಲಭ್ಯವನ್ನು ಪಡೆಯುತ್ತಾರೆ. ಇನ್ನು ದೆಹಲಿಯ ವಿಚಾರಕ್ಕೆ ಬರೋದಾದ್ರೆ ದೆಹಲಿಯ ಮಾಜಿ ಶಾಸಕರು ಪ್ರತಿ ತಿಂಗಳು 15000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಒಬ್ಬ ಶಾಸಕ, ಮೂರ್ನಾಲ್ಕು ಬಾರಿ ಗೆದ್ದರೂ ಅವರ ಪಿಂಚಣಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗೋದಿಲ್ಲ. ಪ್ರತಿ ಗೆಲುವಿನ ನಂತ್ರ ಒಂದು ಸಾವಿರ ರೂಪಾಯಿ ಪಿಂಚಣಿ ಹೆಚ್ಚಾಗುತ್ತದೆ. ಇದು ಕೂಡ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಉತ್ತರ ಪ್ರದೇಶದಲ್ಲಿ ಒಬ್ಬ ಶಾಸಕ ಪ್ರತಿ ಬಾರಿ ಗೆದ್ದಾಗ್ಲೂ ಆತನ ಪಿಂಚಣಿ 2 ಸಾವಿರ ರೂಪಾಯಿ ಹೆಚ್ಚಾಗುತ್ತದೆ.

ಹಿರಿಯ ಸಂಸದರಿಗೆ ಪ್ರತಿ ತಿಂಗಳ ಪಿಂಚಣಿ ಎಷ್ಟು ? : ಇನ್ನು ಸಂಸತ್ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ ಕಾಯ್ದೆ-1954 ರ ಅಡಿಯಲ್ಲಿ ಬರುತ್ತದೆ. ಮಾಜಿ ಸಂಸದರು ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಒಬ್ಬ ಸಂಸದ ಐದು ವರ್ಷಗಳಿಗಿಂತ ಹೆಚ್ಚು ಕಾಲ ಸಂಸದರಾಗಿ ಉಳಿದರೆ, ಅಂದರೆ, ಅವರ ಸೇವಾ ಹಿರಿತನವನ್ನು ಗೌರವಿಸಿ ಪ್ರತಿ ವರ್ಷ 1,500 ರೂಪಾಯಿಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.

ಶಾಸಕರ ಸಂಸದರಾದ್ರೆ ಹೇಗೆ ಸಿಗುತ್ತೆ ಪಿಂಚಣಿ ? : ಒಬ್ಬ ಶಾಸಕರು ಸಂಸದರಾದ್ರೆ ಅವರಿಗೆ ಡಬಲ್ ಪಿಂಚಣಿ ಸಿಗುತ್ತದೆ. ಸಂಸದರ ಸಂಬಳ ಹಾಗೂ ಶಾಸಕರ ಪಿಂಚಣಿ ಅವರಿಗೆ ಸಿಗುತ್ತದೆ. ಮುಂದೆ ಅವರು ಮಾಜಿ ಸಂಸದರಾದ್ಮೇಲೆ ಅವರಿಗೆ ಸಂಸದರ ಪಿಂಚಣಿ ಹಾಗೂ ಶಾಸಕರ ಪಿಂಚಣಿ ಎರಡೂ ಲಭ್ಯವಾಗುತ್ತದೆ. ಇಲ್ಲಿ ಅವರು ಶಾಸಕರಾಗಿ ಅಥವಾ ಸಂಸದರಾಗಿ ಎಷ್ಟು ವರ್ಷ ಅಧಿಕಾರದಲ್ಲಿದ್ದರು ಎಂಬುದು ಮುಖ್ಯವಾಗುವುದಿಲ್ಲ. ಒಂದೇ ದಿನ ಶಾಸಕನಾಗಿರಲಿ ಇಲ್ಲ 30 ವರ್ಷ ಸಂಸದನಾಗಿರಲಿ ಅವರಿಗೆ ನಿಗದಿಪಡಿಸಿದ ಪಿಂಚಣಿಯೇ ಸಿಗುತ್ತದೆ. ಸಂಸದರ ಕುಟುಂಬ ಸದಸ್ಯರಿಗೂ ಪಿಂಚಣಿ ಸೌಲಭ್ಯ ಸಿಗುತ್ತದೆ. ಸಂಸದರು ಅಥವಾ ಮಾಜಿ ಸಂಸದರು ಸಾವನ್ನಪ್ಪಿದ್ರೆ ಅವರ ಪತ್ನಿ ಅಥವಾ ಅವಲಂಬಿತರಿಗೆ ಪಿಂಚಣಿ ಪಡೆಯುತ್ತಾರೆ.
ಇತರ ಸೌಲಭ್ಯ : ಮಾಜಿ ಸಂಸದರು ಉಚಿತ ರೈಲು ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಾರೆ. ಮಾಜಿ ಸಂಸದರು ಇನ್ನೊಬ್ಬರ ಜೊತೆ ಎರಡನೇ ಎಸಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಫಸ್ಟ್ ಎಸಿಯಲ್ಲಿ ಉಚಿತವಾಗಿ ಒಬ್ಬಂಟಿಯಾಗಿ ಪ್ರಯಾಣಿಸಬಹುದು.