ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷ ಭಾನುವಾರ (ಫೆ.2) ರಾತ್ರಿ ಡುಮ್ಕಾದ ಗಾಂಧಿ ಮೈದಾನದಲ್ಲಿ ನಡೆದ 46ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಗಳನ್ನು ದೃಢವಾಗಿ ವಿರೋಧಿಸುವ 50 ಅಂಶಗಳ ನಿರ್ಣಯವನ್ನು ಅಂಗೀಕರಿಸಿದೆ.

ಈ ನೀತಿಗಳನ್ನು ಜಾರ್ಖಂಡ್ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಪಕ್ಷ ಮನವಿ ಮಾಡಿದೆ.
ಇದರ ಜೊತೆಗೆ, ಛೋಟಾನಾಗಪುರ ಒಕ್ಕಲು (ಸಿಎನ್‌ಟಿ) ಕಾಯ್ದೆ ಮತ್ತು ಸಂತಾಲ್ ಪ್ರಜ್ಞಾ ಒಕ್ಕಲು (ಎಸ್‌ಪಿಟಿ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜೆಎಂಎಂ ಕರೆ ನೀಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಲು ಬಾಕಿ ಇರುವ 1.36 ಲಕ್ಷ ಕೋಟಿ ರೂ.ಗಳನ್ನು ಪಾವತಿಸಬೇಕೆಂದು ಒತ್ತಾಯಿಸಿದೆ.

ಕಾರ್ಯಕ್ರಮದಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕೇಂದ್ರ ಸರ್ಕಾರವನ್ನು ಟೀಕಿಸಿದರು. ಈ ಬಾರಿಯ ಬಜೆಟ್‌ನಲ್ಲಿ ಜಾರ್ಖಂಡ್ ಅನ್ನು ಕಡೆಗಣಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು. “ಊಳಿಗಮಾನ್ಯ ಮನಸ್ಥಿತಿ” ಹೊಂದಿರುವ ಕೆಲವು ಗುಂಪುಗಳು ರಾಜ್ಯದ ಬುಡಕಟ್ಟು ಜನಸಂಖ್ಯೆಯ ಪ್ರಗತಿಯನ್ನು ತಡೆಯಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ, ರಾಷ್ಟ್ರೀಯ ಖಜಾನೆಗೆ ಗಣನೀಯ ಕೊಡುಗೆ ನೀಡುತ್ತಿದ್ದರೂ ಜಾರ್ಖಂಡ್ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿದೆ” ಎಂದು ಹೇಮಂತ್ ಸೊರೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ರಾಜ್ಯಗಳು, ವಿಶೇಷವಾಗಿ ಅಭಿವೃದ್ಧಿಯಾಗದ ರಾಜ್ಯಗಳು ಕೇಂದ್ರದಿಂದ ಸಮಾನ ಪರಿಗಣನೆ ಪಡೆಯಬೇಕು” ಎಂದು ಅವರು ಒತ್ತಿ ಹೇಳಿದ್ದಾರೆ.

ಕೇಂದ್ರದ ಬಜೆಟ್ ಅನ್ನು ಟೀಕಿಸಿದ ಸೊರೇನ್, “ಇದು ಶ್ರೀಮಂತರ ಪರ ಮತ್ತು ಬಡವರ ಪ್ರಯೋಜನವಿಲ್ಲದ ಬಜೆಟ್ ಎಂದು ಹೇಳಿದ್ದಾರೆ. “ಹಣದುಬ್ಬರವು ಗಗನಕ್ಕೇರುತ್ತಿರುವಾಗ ಮತ್ತು ಜಿಎಸ್‌ಟಿಯಲ್ಲಿ ಯಾವುದೇ ಪರಿಹಾರವಿಲ್ಲದಿದ್ದಾಗ ತೆರಿಗೆ ರಿಯಾಯಿತಿಗಳು ಸಹಾಯ ಮಾಡುವುದಿಲ್ಲ” ಎಂದಿದ್ದಾರೆ. ಸರ್ಕಾರದ ಹೊಸ ಉಪಕ್ರಮವಾದ ಗ್ಯಾನ್ (ಗರಿಬ್, ಯುವ, ಅನ್ನದಾತ, ನಾರಿ), ನೇರ ಆರ್ಥಿಕ ಬೆಂಬಲಕ್ಕಿಂತ ಹೆಚ್ಚಾಗಿ ಸಾಲಗಳನ್ನು ನೀಡುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ

ಜಾರ್ಖಂಡ್‌ನ ಕಲ್ಯಾಣ ಯೋಜನೆಗಳನ್ನು ಎತ್ತಿ ತೋರಿಸಿದ ಸೊರೇನ್, ಮಹಿಳೆಯರಿಗೆ ಮಾಸಿಕ 2,500ರೂಪಾಯಿ ಆರ್ಥಿಕ ನೆರವು ನೀಡಿದ ಮೊದಲ ರಾಜ್ಯ ನಮ್ಮದು ಹೇಳಿದರು. ಬಿಜೆಪಿಯನ್ನು ಟೀಕಿಸಿದ ಅವರು, “ಅವರು ನಮ್ಮ ಯೋಜನೆಗಳನ್ನು ಬಿಟ್ಟಿ ಎಂದು ಕರೆದರು. ಆದರೆ, ಈಗ ಅವರೇ ದೆಹಲಿಯಲ್ಲಿ ಉಚಿತ ಭರವಸೆಗಳನ್ನು ನೀಡಿದ್ದಾರೆ. ನಾವು ಮಾಡಿದಾಗ ತಪ್ಪು ಎಂದದ್ದು ಅವರು ಮಾಡಿದಾಗ ಸರಿಯಾಗುತ್ತಾ? ಎಂದು ಪ್ರಶ್ನಿಸಿದ್ದಾರೆ.