ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳ ತಾಳಲಾರದೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಪುರ, ದೇಶವಳ್ಳಿ ಸೇರಿದಂತೆ ಹಲವೆಡೆಗಳಲ್ಲಿ ಜನರು ಮನೆಗಳನ್ನೇ ತೊರೆದಿದ್ದಾರೆ ಎಂದು ವರದಿಯಾಗಿದೆ.

ಪಡೆದಿರುವ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿಲ್ಲ ಎಂದು ಮೈಕ್ರೋ ಫೈನಾನ್ಸ್ ಕಂಪನಿಗಳ ಏಜೆಂಟರು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಹಲವು ಕುಟುಂಬಗಳು ಮನೆಗೆ ಬೀಗ ಹಾಕಿ, ಊರು ಬಿಟ್ಟು ಹೋಗಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಕೆಲ ಮಕ್ಕಳು ತಮ್ಮ ಶಿಕ್ಷಣವನ್ನೂ ಅರ್ಧದಲ್ಲಿ ನಿಲ್ಲಿಸಿ ತಮ್ಮ ಫೋಷಕರೊಂದಿಗೆ ಬೇರೆ ಜಿಲ್ಲೆ, ರಾಜ್ಯಗಳಿಗೆ ತೋಟದ ಕೆಲಸಕ್ಕೆ ಹೋಗಿದ್ದಾರೆ. ಮೋಹನ್ ಎಂಬ ವಿದ್ಯಾರ್ಥಿಯೊಬ್ಬ ತಂದೆ ಮಾಡಿದ ಸಾಲ ತೀರಿಸುವ ಸಲುವಾಗಿ ತನ್ನ ಕಿಡ್ನಿ ಮಾರಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಫೈನಾನ್ಸ್ ಏಜೆಂಟ್ ಈತನ ಮನೆಗೆ ಬಂದು ಅಶ್ಲೀಲ ಪದ ಬಳಸಿ ತಾಯಿಗೆ ನಿಂದಿಸಿದ್ದ. ಇದರಿಂದ ಬೇಸತ್ತು ಕಿಡ್ನಿ ಮಾರಲು ಮುಂದಾಗಿದ್ದಾನೆ ಎಂದು ವರದಿ ವಿವರಿಸಿದೆ.

ಏಜೆಂಟರು ರಾತ್ರಿ ವೇಳೆ ಸಾಲ ಪಡೆದವರ ಮನೆಗಳಿಗೆ ಭೇಟಿ ನೀಡಿ, ಅವರ ಮಕ್ಕಳ ಸಮ್ಮುಖದಲ್ಲಿಯೇ ಕಿರುಕುಳ ನೀಡುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮೈಕ್ರೋಫೈನಾನ್ಸ್ ಕಂಪನಿಗಳು 24% ಬಡ್ಡಿಗೆ ಸಾಲ ವಿತರಿಸಿವೆ ಎಂದು ಹೆಗ್ಗವಾಡಿಪುರದ ಜನರು ಆರೋಪಿಸಿದ್ದಾರೆ. ಕೆಲವು ಫೈನಾನ್ಸ್ ಕಂಪನಿಗಳನ್ನು ಟ್ರಸ್ಟ್ಗಳು ನಡೆಸುತ್ತಿವೆ. ನೆರೆಯ ತಮಿಳುನಾಡಿನ ಕಂಪನಿಗಳು ಕೂಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಂಪನಿಗಳು ವ್ಯಕ್ತಿಗಳಿಗೆ ಮಾತ್ರವಲ್ಲದೆ ಮಹಿಳಾ ಸ್ವಸಹಾಯ ಗುಂಪುಗಳಿಗೂ ಹಣವನ್ನು ಸಾಲ ನೀಡುತ್ತವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾಗಿ ವರದಿ ಹೇಳಿದೆ.

ಫೈನಾನ್ಸ್ ಕಂಪನಿ ಕಿರುಕುಳ ತಾಳಲಾರದೆ ಪೋಷಕರು ಅತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಕೆಲ ಮಕ್ಕಳು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಜನರು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೋಗಬಾರದು. ಸಹಾಯಕ್ಕಾಗಿ ತಮ್ಮನ್ನು, ಸಹಾಯಕ ಆಯುಕ್ತರನ್ನು, ತಹಶೀಲ್ದಾರ್ ಮತ್ತು ಸ್ಥಳೀಯ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಗ್ರಾಮಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಹೇಳಿದೆ.

ಜನರಿಗೆ ಅರಿವು ಮೂಡಿಸಲು ವಿಶೇಷ ಪಂಚಾಯತ್ ಸಭೆಗಳನ್ನು ನಡೆಸಲು ಜಿಲ್ಲಾಡಳಿತ ಯೋಜಿಸಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ