ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಹನಿ ರೋಸ್ ಅವರು ಉದ್ಯಮಿ, ಖ್ಯಾತ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರ್ ವಿರುದ್ಧ ನಿರಂತರ ಅಶ್ಲೀಲ ನಿಂದನೆ ಆರೋಪದ ಮೇಲೆ ಜನವರಿ 7ರಂದು ಪೊಲೀಸ್ ದೂರು ದಾಖಲಿಸಿದ್ದಾರೆ.

ಕೇರಳದ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಬಿ ಅವರೊಂದಿಗೆ, ಅವರ ಕೆಲ ಬೆಂಬಲಿಗರ ವಿರುದ್ದವೂ ದೂರು ದಾಖಲಿಸುವುದಾಗಿ ಜನವರಿ 7ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಹನಿ ರೋಸ್ ಹೇಳಿದ್ದಾರೆ.

ಬಾಬಿ ಚೆಮ್ಮನೂರ್, ನಿಮ್ಮ ನಿರಂತರ ಅಶ್ಲೀಲ ನಿಂದನೆಯ ವಿರುದ್ದ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಿಮ್ಮ ಮಾನಸಿಕ ಸ್ಥಿತಿಯನ್ನು ವ್ಯಕ್ತಪಡಿಸುವ ನಿಮ್ಮ ಸಹವರ್ತಿಗಳ ವಿರುದ್ಧವೂ ಶೀಘ್ರದಲ್ಲೇ ದೂರು ನೀಡಲಿದ್ದೇನೆ. ನಿಮ್ಮ ಹಣದ ಬಲವನ್ನು ನೀವು ನಂಬಿರಬಹುದು. ಆದರೆ, ನಾನು ಭಾರತದ ನ್ಯಾಯಾಂಗ ವ್ಯವಸ್ಥೆಯ ಬಲವನ್ನು ನಂಬುತ್ತೇನೆ” ಎಂದು ತನ್ನ ಪೋಸ್ಟ್‌ನಲ್ಲಿ ಹನಿ ರೋಸ್ ಬರೆದುಕೊಂಡಿದ್ದಾರೆ

ಈ ಹಿಂದೆ ಆಭರಣ ಮಳಿಗೆಯೊಂದರ ಉದ್ಘಾಟನೆ ವೇಳೆ ಹನಿ ರೋಸ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಾಬಿ ಚೆಮ್ಮನೂರ್ ಅವರು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು.
“ಈ ಪ್ರಕರಣ ಸಂಬಂಧ ಜನವರಿ 5ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲ ಪೋಸ್ಟ್ ಹಾಕಿದ್ದ ಹನಿ ರೋಸ್ ಅವರು “ಒಬ್ಬ ವ್ಯಕ್ತಿಯು ನಿರಂತರವಾಗಿ ನನ್ನನ್ನು ಅವಮಾನಿಸಲು ಪ್ರಯತ್ನಿಸಿದಾಗ ನಾನು ಮೌನವಾಗಿದ್ದರೆ, ನಾನು ಅದನ್ನು ಆನಂದಿಸುತ್ತಿದ್ದೇನೆ ಅಥವಾ ಆತ ಮಾಡಿದ್ದೆಲ್ಲವನ್ನು ಒಪ್ಪಿಕೊಂಡಿದ್ದೇನೆಯೇ? ಎಂದು ನನ್ನ ಆಪ್ತರು ಕೇಳುತ್ತಾರೆ. ಈ ವ್ಯಕ್ತಿಯು ಕೆಲವು ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಿದ್ದ. ನಾನು ಹಾಜರಾಗಲು ನಿರಾಕರಿಸಿದ್ದೆ.ಈ ಕಾರಣಕ್ಕೆ ನಾನು ಭಾಗವಹಿಸುವ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿದ್ದಾನೆ. ನನನ್ನು ಗುರಿಯಾಗಿಸಿ ಹೆಣ್ತನಕ್ಕೆ ಅವಮಾನಿಸುವ ರೀತಿಯಲ್ಲಿ ಸಾರ್ವಜನಿಕವಾಗಿ ನನ್ನ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡುತ್ತಿದ್ದಾನೆ” ಎಂದು ಬಾಬಿ ಚೆಮ್ಮನ್ನೂರ್ ಅವರ ಹೆಸರು ಉಲ್ಲೇಖಿಸಿದೆ ಹನಿರೋಸ್ ಬರೆದುಕೊಂಡಿದ್ದರು.

ಈ ಪೋಸ್ಟ್‌ನ ಕೆಳಗೆ ಅನೇಕ ಜನರು ಅವಹೇಳನಕಾರಿ ಕಾಮೆಂಟ್‌ಗಳನ್ನು ಹಾಕಿದ್ದರು. ಅದು ಹನಿ ರೋಸ್ ಅವರನ್ನು ದೂರು ದಾಖಲಿಸಲು ಪ್ರೇರೇಪಿಸಿತು ಎಂದು ವರದಿಯಾಗಿದೆ.
ಹನಿ ರೋಸ್ ದೂರು ಆಧರಿಸಿ ಎರ್ನಾಕುಲಂ ಸೆಂಟ್ರಲ್ ಪೊಲೀಸರು 27 ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಕುಂಬಳಂನ ಶಾಜಿ ಎಂಬ ವ್ಯಕ್ತಿಯನ್ನು ಜನವರಿ 6 ರಂದು ಸೋಮವಾರ ಬಂಧಿಸಲಾಗಿದೆ. ಈತನ ವಿರುದ್ದ ಹನಿ ರೋಸ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಅಡಿಯಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌ಗಳು ಹಾಕಿರುವ ಆರೋಪವಿದೆ. ಹನಿ ರೋಸ್ ಸ್ಕ್ರೀನ್‌ಶಾಟ್‌ಗಳನ್ನು ಪೊಲೀಸರಿಗೆ ಪುರಾವೆಯಾಗಿ ಸಲ್ಲಿಸಿದ್ದಾರೆ ಎಂದು ವರದಿಗಳು ಹೇಳಿವೆ