ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡೀಪೋರಾ (Bandipore) ಜಿಲ್ಲೆಯಲ್ಲಿ ಶನಿವಾರ ಸೇನಾ ವಾಹನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ (Army Vehicle Falls) ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಮಧ್ಯಾಹ್ನ 2.30ರ ಸುಮಾರಿಗೆ ಎಸ್‌ಕೆ ಪೇಯೆನ್ ಪ್ರದೇಶದ ಬಳಿ ಕೆಟ್ಟ ಹವಾಮಾನ ಪರಿಸ್ಥಿತಿಯಿಂದ ವಾಹನವು ಚಾಲಕನ ನಿಯಂತ್ರಣ ತಪ್ಪಿ, ದುರಂತ ಸಂಭವಿಸಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಯೋಧರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಅಪಘಾತ ಸ್ಥಳದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ 2024ರ ಡಿಸೆಂಬರ್ 24ರಂದು ಪೂಂಚ್‌ನಲ್ಲಿ ಸೇನಾವಾಹನ 350 ಆಳದ ಪ್ರಪಾತಕ್ಕೆ ಬಿದ್ದು, ಐವರು ಸೈನಿಕರು ಸಾವನ್ನಪ್ಪಿದ್ದರು ಮತ್ತು ಐವರು ಗಾಯಗೊಂಡಿದ್ದರು. ಈ ಪೈಕಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾದರು.

ಇದಕ್ಕೂ ಮುನ್ನ 2024ರ ನವೆಂಬರ್ 4ರಂದು ರಜೌರಿ ಜಿಲ್ಲೆಯಲ್ಲಿ ಸೇನಾ ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದು ಓರ್ವ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು, ಮತ್ತೊಬ್ಬರು ಗಾಯಗೊಂಡಿದ್ದರು. ನವೆಂಬರ್ 2ರಂದು ರಿಯಾಸಿ ಜಿಲ್ಲೆಯಲ್ಲಿ ಕಾರೊಂದು ಕಮರಿಗೆ ಬಿದ್ದು 10 ತಿಂಗಳ ಮಗು ಸೇರಿ ಮೂವರು ಸಾವನ್ನಪ್ಪಿದ್ದರು ಹಾಗೂ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.