ಮೈಸೂರಿನಲ್ಲಿ ರಸ್ತೆ ರಾದ್ಧಾಂತ ಮುಂದುವರಿದೆ. ಮೈಸೂರಿನ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡುವ ಪ್ರಸ್ತಾವಕ್ಕೆ ಬಿಜೆಪಿ ಸಂಸದ ಯದುವೀರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರಸ್ತೆಗೆ ಐತಿಹಾಸಿಕವಾಗಿ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿದೆ ಎಂದು ಯದುವೀರ್ ಟ್ವೀಟ್ ಮಾಡುವ ಮೂಲಕ ದಾಖಲೆಗಳನ್ನು ಹಂಚಿಕೊಂಡಿದ್ದಾರೆ.

ಮೈಸೂರು, ಜನವರಿ 02: ಮುಡಾ ನಿವೇಶನ ಪ್ರಕರಣ ಮರೆಯಾಗುತ್ತಿದ್ದಂತೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ರಸ್ತೆ ನಾಮಕರಣ ವಿವಾದ ಮುನ್ನಲೆಗೆ ಬಂದಿದೆ. ಪ್ರಿನ್ಸಸ್ ರಸ್ತೆಗೆ ದಾಖಲೆ ಇಲ್ಲವೆಂದು ಕಾಂಗ್ರೆಸ್ ಮುಖಂಡರು ವಾದಿಸುತ್ತಿದ್ದಾರೆ. ಆದರೆ ಇದೀಗ ಪ್ರಿನ್ಸೆಸ್ ರಸ್ತೆ ಎಂಬುದಕ್ಕೆ ದಾಖಲೆಗಳಿವೆ ಎಂದು ಮ್ಯಾಪ್, ಪತ್ರ ವ್ಯವಹಾರದ ದಾಖಲೆಗಳನ್ನು ಹಂಚಿಕೊಳ್ಳುವ ಮೂಲಕ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದನ್ನು ಬಿಜೆಪಿ ಸಂಸದ ಯದುವೀರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಯದುವೀರ್, ಕೆಆರ್ಎಸ್ ರಸ್ತೆಗೆ ಅಧಿಕೃತ ಹೆಸರು ನೀಡಿರುವ ಉಲ್ಲೇಖಗಳಿಲ್ಲ ಎಂದು ಹೇಳುತ್ತಿರುವ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರೇ, ಈ ದಾಖಲೆಗಳನ್ನೊಮ್ಮೆ ನೋಡಿ ಎಂದಿದ್ದಾರೆ.
- ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ರವರ ದೂರದ ಸಂಬಂಧಿಯೊಬ್ಬರು ಪ್ರಿನ್ಸೆಸ್ ರಸ್ತೆಯಲ್ಲಿ ವಾಸವಿದ್ದರು, ಅವರು ಬರೆದಿರುವಂತಹ at post ಪತ್ರಗಳ ವಿಳಾಸದಲ್ಲಿ ‘ಪ್ರಿನ್ಸೆಸ್ ರಸ್ತೆ’ಯ ಹೆಸರು ಬಳಸಲಾಗಿದೆ.
- ಕೇಂದ್ರ ಸರ್ಕಾರದ ಭಾರತದ ಮ್ಯಾಪಿಂಗ್ ಮತ್ತು ಸಮೀಕ್ಷೆಯ ಉಸ್ತುವಾರಿ ಹೊಂದಿರುವ ಸರ್ಕಾರಿ ಇಲಾಖೆಯವರ ಮೈಸೂರು ಟೂರ್ ಮ್ಯಾಪ್, ಗೈಡ್ನಲ್ಲಿರುವ ಮೈಸೂರಿನ ನಕ್ಷೆಯಲ್ಲಿ ‘ಪ್ರಿನ್ಸೆಸ್ ರಸ್ತೆ’ಯನ್ನು ಗುರುತಿಸಿ ಹೆಸರಿಸಲಾಗಿದೆ.
- ಅಧಿಕೃತವಾಗಿ 1921ರಲ್ಲಿ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯು ಇದೇ ರಸ್ತೆಗೆ ಪ್ರಿನ್ಸೆಸ್ ರಸ್ತೆ’ ಎಂದು ನಾಮಕರಣ ಮಾಡಿರುವುದಕ್ಕೆ ದಾಖಲೆ ಇದೆ.

ಈ ರಸ್ತೆಗೆ ಮರುನಾಮಕರಣದ ಹೆಸರಿನಲ್ಲಿ ಗೊಂದಲ ಸೃಷ್ಟಿಸುವ ಬದಲು, ಅದರ ಮೂಲಗಳನ್ನು ಪರಿಶೀಲಿಸಿ. ಅಂದಿನ ರಾಜಮನೆತನ ಸಮಾಜಕ್ಕೆ ಕೊಡುಗೆ ನೀಡಿರುವುದನ್ನು ಗುರುತಿಸಿ ಗೌರವಿಸಬೇಕು. ಕಾಲಕಾಲಕ್ಕೂ ಅವರ ಸೇವೆಗಳು ಶಾಶ್ವತವಾಗಿಡುವುದು ಮತ್ತು ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವುದು ಪಾಲಿಕೆ ಮತ್ತು ಸರ್ಕಾರಗಳ ಜವಾಬ್ದಾರಿ ಎಂದು ಕಿಡಿಕಾರಿದ್ದಾರೆ.

ಕೋರ್ಟ್ ಇದ್ದೇ ಇದೆ, ಅಲ್ಲೇ ತೀರ್ಮಾನ ಆಗಲಿ: ಪ್ರೊ.ನಂಜರಾಜೇ ಅರಸ್
ಇನ್ನು ಈ ಬಗ್ಗೆ ಪಾಲಿಕೆ ಆಯುಕ್ತರ ಭೇಟಿ ಬಳಿಕ ಪ್ರೊ.ನಂಜರಾಜೇ ಅರಸ್ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ನನ್ನ ಹೆಸರು ಆ ರಸ್ತೆಗೆ ಬೇಡ ಅನ್ನೋ ನಂಬಿಕೆ ಇದೆ. ಸಿದ್ದರಾಮಯ್ಯ ಹೆಸರನ್ನು ಕೆಲ ದನಗಳು ಬೀದಿಗೆ ತಂದಿದ್ದಾರೆ. ಹಾದಿ ಬೀದಿಯಲ್ಲಿ ಸಿದ್ದರಾಮಯ್ಯರ ಹೆಸರು ಹಾಳು ಮಾಡುತ್ತಿದ್ದಾರೆ. ಇಲ್ಲದಿದ್ದರೆ ಕೋರ್ಟ್ ಇದ್ದೇ ಇದೆ, ಅಲ್ಲೇ ತೀರ್ಮಾನ ಆಗಲಿ ಎಂದಿದ್ದಾರೆ
ಪ್ರಿನ್ಸೆಸ್ ರಸ್ತೆ ಕುರಿತು ಪಾಲಿಕೆ ಆಯುಕ್ತರಿಗೆ ದಾಖಲೆ ಕೊಟ್ಟಿದ್ದೇವೆ. ಪಾಲಿಕೆ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬಾರದು. ಹಿಂದಿನಿಂದಲೂ ಪ್ರಿನ್ಸೆಸ್ ರಸ್ತೆ ಅಂತಾ ಇದೆ, ಇದಕ್ಕೆ ದಾಖಲೆಗಳಿವೆ. ಈ ಬಗ್ಗೆ ಆಯುಕ್ತರ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದ್ದಾರೆ.

ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಜೊತೆಗೂ ಮಾತನಾಡಿದ್ದೇನೆ. ಅಭಿಮಾನಿಗಳೆಂದು ಹೇಳಿಕೊಂಡು ಸಿಎಂ ಹೆಸರು ಹಾಳು ಮಾಡಬೇಡಿ. ಖುದ್ದು ಸಿದ್ದರಾಮಯ್ಯ ಜೊತೆಗೆ ಈ ರಸ್ತೆ ಬಗ್ಗೆ ಮಾತನಾಡುತ್ತೇನೆ. ಆಕ್ಷೇಪಣೆ ಸಲ್ಲಿಸಲು ಮೈಸೂರು ಪಾಲಿಕೆ ದಿನಾಂಕ ನಿಗದಿ ಮಾಡಿದೆ. ಅವಧಿ ಮುಗಿದ ಬಳಿಕ ಮೀಟಿಂಗ್ ಮಾಡುತ್ತೇವೆ ಎಂದರು.