ಉಳ್ಳಾಲ, ಡಿ.29: ಮಂಜನಾಡಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾತಿಮತ್ ಮಾಯಿಝ (9) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಮೃತಪಟ್ಟಿದ್ದು, ದುರಂತದಲ್ಲಿ ತಾಯಿ, ಇಬ್ಬರು ಪುತ್ರಿಯರು ದಾರುಣ ಮೃತಪಟ್ಟಿದ್ದಾರೆ.

ಡಿಸೆಂಬರ್ 8ರಂದು ಮಂಜನಾಡಿ ಗ್ರಾಮದ ಖಂಡಿಕ ನಿವಾಸಿಯಾಗಿದ್ದ ಮುತ್ತಲಿಬ್ ಅವರ ಮನೆಯಲ್ಲಿ ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಈ ಸಂದರ್ಭ ಮುತ್ತಲಿಬ್ ಅವರ ಪತ್ನಿ ಖುಬ್ರಾ ಮತ್ತು ಮಕ್ಕಳಾದ ಝುಲೈಕ ಮೆಅದಿಯಾ, ಮಾಝಿಯಾ ಮತ್ತು ಮಾಯಿದಾ ಕೊಠಡಿಯಲ್ಲಿ ಮಲಗಿದ್ದರು. ಸ್ಫೋಟದ ಪರಿಣಾಮ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿತ್ತು. ಘಟನೆಯಲ್ಲಿ ನಾಲ್ವರೂ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮುತ್ತಲಿಬ್ ಅವರ ಪತ್ನಿ ಖುಬ್ರಾ ಅವರು ಚಿಕಿತ್ಸೆ ಫಲಕಾರಿಯಾಗದೆ ಡಿ.13ರಂದು ಮೃತಪಟ್ಟಿದ್ದರು. ಕಳೆದ ಗುರುವಾರ ಖುಬ್ರಾ ಅವರ ಹಿರಿಯ ಮಗಳು ಝುಲೇಕ ಮೆಅದಿಯ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ತ್ತೋರ್ವ ಮಗಳು ಮಾಯಿದಾ ಚಿಕಿತ್ಸೆಗೆ ಸ್ಪಂದಿಸಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಮಗಳು ಫಾತಿಮತ್ ಮಾಯಿಝ ಶನಿವಾರ ಮೃತಪಟ್ಟಿದ್ದಾಳೆ. ಮೃತಳು ಮೊಂಟೆಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮುತ್ತಲೀಬ್ ಅವರ ಏಕೈಕ ಪುತ್ರಿ ಮಾಯಿದಾ ಬದುಕುಳಿದಿದ್ದು, ಆಕೆ ಆಸ್ಪತ್ರೆಯಿಂದ ಬಿಡುಗಡೆ ಆಗಿ ಅಜ್ಜಿ ಜೊತೆ ಆಶ್ರಯ ಪಡೆದಿದ್ದಾಳೆ.

ಘಟನಾ ಸ್ಥಳಕ್ಕೆ ಶನಿವಾರ ಬೆಳಗ್ಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಳಿಕ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಗ್ಯಾಸ್ ಸೋರಿಕೆಯಿಂದ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಸಂಬಂಧಿಸಿ ಶಿಷ್ಟಾಚಾರ ಪ್ರಕಾರ ದಾಖಲೆ ಸಹಿತ ವರದಿ ನೀಡಬೇಕು ಎಂದು ಎಚ್.ಪಿ ಗ್ಯಾಸ್ ನ ವಲಯ ಮಾರುಕಟ್ಟೆ ಸಿಬ್ಬಂದಿ ರಾಹುಲ್ ಗೆ ಖಾದರ್ ಸೂಚನೆ ನೀಡಿದ್ದಾರೆ.