ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಶುಕ್ರವಾರದ (ಡಿ.27) ವಹಿವಾಹಿಟಿನಲ್ಲಿ 21 ಪೈಸೆ ಕುಸಿತ ಕಂಡು ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯ ₹85.48 ಆಗಿದೆ.

ಶುಕ್ರವಾರ ವಹಿವಾಟಿನ ಆರಂಭದಲ್ಲಿ ₹85.31 ಇದ್ದ ರೂಪಾಯಿ ಮೌಲ್ಯ, ಇಂಟ್ರಾಡೇ ವಹಿವಾಟಿನಲ್ಲಿ 53 ಪೈಸೆ ಕುಸಿದು ಎರಡು ವರ್ಷದ ವರ್ಷದ ಕನಿಷ್ಠ ಮಟ್ಟವಾದ ₹85.80ಗೆ ತಲುಪಿತ್ತು.
ಬಳಿಕ ಸ್ವಲ್ಪ ಚೇತರಿಕೆ ಕಂಡಿತ್ತು. ಆದರೂ, ₹85.48ರಲ್ಲಿವಹಿವಾಟು ಅಂತ್ಯಗೊಳಿಸಿದೆ. 2023ರ ಫೆಬ್ರವರಿ 2ರಂದು 68 ಪೈಸೆ ಕುಸಿದಿದ್ದು ಈವರೆಗಿನ ಇಂಟ್ರಾಡೇನ ದಾಖಲೆಯ ಕುಸಿತವಾಗಿದೆ.

ಆಮದುದಾರರು ಮತ್ತು ಬ್ಯಾಂಕ್‌ಗಳಲ್ಲಿ ಮಾಸಾಂತ್ಯದ ಪೇಮೆಂಟ್‌ಗೆ ಡಾಲರ್ ಬೇಡಿಕೆ ಹೆಚ್ಚಿದ್ದರಿಂದ ರೂಪಾಯಿ ಮೌಲ್ಯ ಕುಸಿದಿದೆ. ಅಲ್ಪಾವಧಿಯ ಖರೀದಿ ಒಪ್ಪಂದಗಳಲ್ಲಿ ತನ್ನ ಡಾಲರ್ ಪಾವತಿಗಳನ್ನು ಹಿಡಿದಿಟ್ಟುಕೊಳ್ಳುವ ರಿಸರ್ವ್ ಬ್ಯಾಂಕ್‌ನ ನಿಲುವು ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವುದನ್ನು ತಡೆಯಿತು ಎಂದು ವರದಿಗಳು ಹೇಳಿವೆ.

ದೇಶೀಯ ಷೇರುಪೇಟೆ ಸ್ಥಿರವಾಗಿದ್ದರೂ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂಪಡೆಯುತ್ತಿರುವುದು ಮುಂದುವರಿದಿದೆ. ಗುರುವಾರದ ವಹಿವಾಟಿನಲ್ಲಿ ₹2,376 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ವಾರಗಳಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಿದೆ. ಜೊತೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಏರಿಕೆಯಾಗುತ್ತಿದೆ. ಇದು ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.