ಗದಗ: ಅನ್ವರ್ ಮಾಣಿಪ್ಪಾಡಿ ವಕ್ಫ್ ಬಗ್ಗೆ ಹೇಳಿಕೆ ನೀಡಿರುವ ವಿಡಿಯೋ ಆಧಾರದ ಮೇಲೆ ನಾನು ಮಾತನಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಜಿಲ್ಲೆಯ ಜಿಲ್ಲೆಯ ರೋಣ ಪಟ್ಟಣದ ಹೆಲಿಪ್ಯಾಡ್ ಮೈದಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಬಿವೈ ವಿಜಯೇಂದ್ರ 150 ಕೋಟಿ ರೂ. ಆಮಿಷ ಒಡ್ಡಿದ ಬಗ್ಗೆ ಮಾಣಿಪ್ಪಾಡಿ (Anwar Manipaddy) ಅವರು ಅವರದ್ದೇ ವಿಡಿಯೋದಲ್ಲಿ ಹೇಳಿದ್ದಾರೆ. ಅದರ ಆಧಾರದ ಮೇಲೆ ನಾನು ಮಾತನಾಡಿದ್ದೇನೆ. ಹೀಗಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಸಿಬಿಐ ತನಿಖೆಗೆ ಕೊಟ್ಟರೆ ಕಾಂಗ್ರೆಸ್ಸಿನವರೇ (Congress) ಸಿಕ್ಕಿ ಬೀಳುತ್ತಾರೆ ಎನ್ನುವ ಬಿಜೆಪಿಗರ (BJP) ಆರೋಪಕ್ಕೆ ಉತ್ತರಿಸಿದ ಅವರು, ಹಾಗಿದ್ದರೆ ಸಿಬಿಐ ತನಿಖೆಗೆ ಕೊಡಲಿ. ವಿಡಿಯೋದಲ್ಲಿರುವ ಧ್ವನಿ ಮಾಣಿಪ್ಪಾಡಿ ಅವರದ್ದೋ? ಅಲ್ಲವೋ? ಎಂದು ಮಾಧ್ಯಮದವರಿಗೆ ಚೆನ್ನಾಗಿ ಗೊತ್ತಿರುತ್ತದೆ ತಾನೇ? ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಅವರು ಸಿಬಿಐಗೆ ಕೊಡಲಿ ಎಂದರು

ಸೋಮವಾರದಿಂದ ಬುಧವಾರವರೆಗೆ ಸುವರ್ಣಸೌಧದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಮಾಡುತ್ತೇವೆ. ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ನಂತರ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮಾತನಾಡಿ, ವಿಡಿಯೋದಲ್ಲಿ ಕೇಳಿಸಿರುವ ಧ್ವನಿ ಅನ್ವರ್ ಮಾಣಿಪ್ಪಾಡಿ ಅವರದ್ದೋ? ಅಲ್ವಾ? ಎಂದು ಮೊದಲು ಮಾಧ್ಯಮದವರು ನಿರ್ಧಾರ ಮಾಡಿ ಹೇಳಿ ಎಂದರು. ಈ ವೇಳೆ ಸಚಿವ ಎಚ್.ಕೆ ಪಾಟೀಲ್, ಶಾಸಕ ಜಿ.ಎಸ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.