ಬೈರೂತ್: ಒಂದೆಡೆ ರಷ್ಯಾ-ಉಕ್ರೇನ್ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಇಸ್ರೇಲ್-ಹಿಜ್ಬುಲ್ಲಾ (Israel – Hezbollah) ನಡುವೆ ಯುದ್ಧದ ಭೀಕರತೆ ವ್ಯಾಪಿಸುತ್ತಿದೆ. ಇತ್ತೀಚೆಗೆ ಇಸ್ರೇಲ್ ಬೈರೂತ್ ನಗರದ ಮೇಲೆ ನಡೆಸಿದ ದಾಳಿಗೆ ಹಿಜ್ಬುಲ್ಲಾ ಪ್ರತೀಕಾರದ ದಾಳಿ ನಡೆಸಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಹೋರಾಟ ಗಾರರು ಸುಮಾರು 250 ರಾಕೆಟ್ (Rocket Strike), ಡೆಡ್ಲಿ ಡ್ರೋನ್ ಹಾಗೂ ಇತರ ಸ್ಫೋಟಕಗಳಿಂದ ಇಸ್ರೇಲ್ ಮೇಲೆ ಅಟ್ಯಾಕ್ ಮಾಡಿದೆ. ದಾಳಿಯಲ್ಲಿ ಸಾವು-ನೋವು ಸಂಭವಿಸದಿದ್ದರೂ 7-8 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಇಸ್ರೇಲ್‌ನ ಐರನ್ ಡೋಮ್ ಹಿಜ್ಬುಲ್ಲಾ ಹೋರಾಟಗಾರರು ಹಾರಿಸಿದ ಕೆಲವು ರಾಕೆಟ್‌ಗಳನ್ನ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಇನ್ನುಳಿದ ಕೆಲವು ರಾಕೆಟ್‌ಗಳು ಟೆಲ್ ಅವೀವ್‌ನಲ್ಲಿ (Tel Aviv) ಭಾರಿ ಕಟ್ಟಡಗಳನ್ನು ಧ್ವಂಸ ಮಾಡಿವೆ ಎನ್ನಲಾಗಿದೆ.

ಮತ್ತೊಂದೆಡೆ ದಕ್ಷಿಣ ಇಸ್ರೇಲ್‌ನ ಅಶ್ಡೋಡ್ ನೌಕಾ ನೆಲೆ, ಗ್ಲಿಲೋಟ್ ಸೇನಾ ಗುಪ್ತಚರ ನೆಲೆ ಹಾಗೂ ಟೆಲ್ ಅವಿವ್‌ನ ಮಿಲಿಟರಿ ಕ್ಯಾಂಪ್‌ಗಳ ಮೇಲೆ ಇದೇ ಮೊದಲ ಬಾರಿಗೆ ಡ್ರೋಣ್ ಬಳಿ ವೈಮಾನಿಕ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿಕೊಂಡಿದೆ. ಈ ಬೆನ್ನಲ್ಲೇ ಇಸ್ರೇಲ್ ಮೇಲೆ ಹಿಜ್ಬುಲ್ಲಾ ಈವರೆಗೆ ನಡೆಸಿದ ದಾಳಿಗಳ ಪೈಕಿ ಅತಿದೊಡ್ಡ ದಾಳಿ ಎಂದು ಇಸ್ರೇಲಿ ಮಿಲಿಟರಿ ಪಡೆಗಳು ಖಚಿತಪಡಿಸಿವೆ.

4,000 ಗಡಿ ಸಮೀಪಿಸಿದ ಸಾವಿನ ಸಂಖ್ಯೆ:
2023ರ ಅಕ್ಟೋಬರ್ ನಿಂದ ಈವರೆಗೆ ಇಸ್ರೇಲ್ – ಲೆಬನಾನ್ ನಡುವಿನ ಯುದ್ಧದಲ್ಲಿ ಕನಿಷ್ಠ 3,754 ಜನ ಮೃತಪಟ್ಟಿದ್ದಾರೆ. ಇಸ್ರೇಲಿ ಭಾಗದಲ್ಲಿ, ಕನಿಷ್ಠ 82 ಸೈನಿಕರು ಮತ್ತು 47 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ, ಇಸ್ರೇಲ್ ಸೈನಿಕರು ಲೇಬನಾನ್ ನಲ್ಲಿ ಸಾವಿರಾರು ಅಮಾಯಕ ನಾಗರೀಕ ರನ್ನು ಕೊಂದು ಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಮೂಲ ಸೌಕರ್ಯಗಳ ಮೇಲಿನ ಹಾನಿಯೂ ದೊಡ್ಡದಾಗಿಯೇ ನಡೆದಿದೆ.

