ಇಂಫಾಲ್: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿಂದು ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ (Manipur Gunfight) ಕನಿಷ್ಠ 11 ಶಂಕಿತ ಕುಕಿ ಬಂಡುಕೋರರನ್ನು (Kuki Militants) ಕೊಂದು ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ

ಅಸ್ಸಾಂ ಗಡಿ ಜಿಲ್ಲೆ ಜಿರಿಬಾಮ್ನಲ್ಲಿ (Jiribam) ಸೋಮವಾರ (ಇಂದು) ಮಧ್ಯಾಹ್ನ 3.30ರ ಸುಮಾರಿಗೆ ಸಿಆರ್ಪಿಎಫ್ ಸೇನಾ ಶಿಬಿರದ ಮೇಲೆ ಕುಕಿ ಬಂಡುಕೋರರು ದಾಳಿ ನಡೆಸಿದ್ದರು. ಈ ವೇಳೆ ಸಿಆರ್ಪಿಎಫ್ (CRPF) ಯೋಧರು ಗಾಯಗೊಂಡಿದ್ದರು, ಓರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. ಈ ಹಿನ್ನೆಲೆ ಎನ್ಕೌಂಟರ್ ನಡೆಸಿದ ಭದ್ರತಾ ಪಡೆ ಬಂಡುಕೋರರನ್ನು ಹೊಡೆದುರುಳಿಸಿದೆ. ಈ ವೇಳೆ ಸ್ಥಳದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು ವಶಪಡಿಕೊಳ್ಳಲಾಗಿದೆ.

ಕುಕಿ ಬಂಡುಕೋರರು ಜಿರಿಬಾಮ್ನಲ್ಲಿರುವ ಪೊಲೀಸ್ ಠಾಣೆಯ ಮೇಲೆ ಎರಡೂ ಕಡೆಯಿಂದ ದಾಳಿ ನಡೆಸಿದ ನಂತರ ಎನ್ಕೌಂಟರ್ ಪ್ರಾರಂಭವಾಯಿತು. ಜಿರಿಬಾಮ್ನ ಬೊರೊಬೆಕ್ರಾದಲ್ಲಿರುವ ಈ ಪೊಲೀಸ್ ಠಾಣೆಯ ಮೇಲೆ ಇತ್ತೀಚಿನ ತಿಂಗಳಲ್ಲಿ ಹಲವಾರು ಬಾರಿ ದಾಳಿ ನಡೆದಿದೆ.

ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ ನಂತರ, ಶಂಕಿತ ಕುಕಿ ಬಂಡುಕೋರರು ಪೊಲೀಸ್ ಠಾಣೆಯಿಂದ 1 ಕಿಮೀ ದೂರದಲ್ಲಿರುವ ಜಕುರಾಡೋರ್ ಕರೋಂಗ್ನಲ್ಲಿನ ಸಣ್ಣ ಶಿಬಿರದ ಕಡೆಗೆ ನುಗ್ಗಿದರು, ಹಲವು ಮನೆಗಳಿಗೆ ಬೆಂಕಿ ಹಚ್ಚಿದರು. ಈ ವೇಳೆ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವೆ ಭಾರಿ ಗುಂಡಿನ ಚಕಮಕಿ ನಡೆಯಿತು.
ಮಣಿಪುರದಲ್ಲಿ ಮತ್ತೆ ಭುಗಿಲೆದ್ದಿರುವ ಹಿಂಸಾಚಾರ 3ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರವು ಈವರೆಗೆ 200ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ.