ಮಂಗಳೂರು, ನ.6: ನಗರದಲ್ಲಿ ಓಡಾಟ ನಡೆಸುವ ಸಿಟಿ ಬಸ್ಗಳನ್ನು ಹೊರತುಪಡಿಸಿ ಎಕ್ಸ್ಪ್ರೆಸ್, ಕಾಂಟ್ರಾಕ್ಟ್ ಕ್ಯಾರೇಜ್, ಸರ್ವಿಸ್ ಬಸ್ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಗಡುವು ವಿಧಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಯಾಣಿಕರ ಸುರಕ್ಷತೆ ಸಲುವಾಗಿ ಬಸ್ಗಳು ಸಂಚರಿಸುವ ವೇಳೆ ಬಾಗಿಲು ಹಾಕಿಕೊಳ್ಳುವುದು ಕಡ್ಡಾಯ. ಈ ಬಗ್ಗೆ ಹಲವು ಬಾರಿ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಹೀಗಾಗಿ ತತ್ಕ್ಷಣದಿಂದಲೇ ಬಾಗಿಲು ಅಳವಡಿಸಲು ಎಲ್ಲ ಖಾಸಗಿ ಬಸ್ಗಳು ಕ್ರಮ ಕೈಗೊಳ್ಳಬೇಕು.
ಮಂಗಳೂರಿನಿಂದ ಸಂಚರಿಸುವ ನಗರ ಸಾರಿಗೆ ಹೊರತಾದ ಎಲ್ಲ ಖಾಸಗಿ ಬಸ್ಗಳು ಕಡ್ಡಾಯವಾಗಿ ಬಾಗಿಲು ಅಳವಡಿಸಬೇಕು. ನಗರ ಸಾರಿಗೆ ಬಸ್ಗಳಿಗೆ ಡೋರ್ ಅಳವಡಿಕೆ ಕುರಿತಂತೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಉಳಿದಂತೆ ಎಲ್ಲ ಖಾಸಗಿ ಬಸ್ಗಳು ಡೋರ್ ಅಳವಡಿಕೆಯನು ಡಿ.10ರೊಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಮಂಗಳೂರಲ್ಲಿ ಸ್ಮಾರ್ಟ್ಸಿಟಿಯ ಕಮಾಂಡಿಂಗ್ ಕಂಟ್ರೋಲ್ ಕೇಂದ್ರ ಇದೆ. ಇದರ ಸುಪರ್ದಿಯಲ್ಲಿ ಖಾಸಗಿ ಬಸ್ಗಳು ಕೂಡ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದೆ. ಜಿಪಿಎಸ್ ಅಳವಡಿಸಿ ಸ್ಮಾರ್ಟ್ಸಿಟಿ ಕಂಟ್ರೋಲ್ ರೂಂ ಜತೆ ಸಂಪರ್ಕ ಇರಿಸಬೇಕು. ಇದರಿಂದ ಬಸ್ಗಳು ಎಲ್ಲೆಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಸುಲಭದಲ್ಲಿ ಸಿಗುತ್ತದೆ. ಇದು ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ. ಜತೆಗೆ ಪ್ಯಾನಿಕ್ ಬಟನ್ ಅಳವಡಿಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಎಂಟು ಹೊಸ ರೂಟ್ಗಳಲ್ಲಿ ಪರವಾನಿಗೆಗೆ ಪ್ರಸ್ತಾವ : ಮಂಗಳೂರು-ಕಾರ್ಕಳ ಸೇರಿದಂತೆ ಎಂಟು ಹೊಸ ರೂಟ್ಗಳಲ್ಲಿ ಪರವಾನಿಗೆ ನೀಡುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪ್ರಸ್ತಾವ ಮುಂದಿರಿಸಿದ್ದು, ಇದಕ್ಕೆ ಖಾಸಗಿ ಬಸ್ ಮಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಖಾಸಗಿ ಬಸ್ ಮಾಲಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಬಳಿ 15 ದಿನಗಳ ಗಡುವು ಕೇಳಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪಾಲಿಕೆ ಆಯುಕ್ತ ಆನಂದ್, ಜಿಲ್ಲಾ ಎಸ್ಪಿ ಯತೀಶ್, ಸಂಚಾರಿ ಡಿಸಿಪಿ ದಿನೇಶ್ ಕುಮಾರ್, ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಉಪಸ್ಥಿತರಿದ್ದರು.