ಕಾರವಾರ: ಬಿಜೆಪಿಯಿಂದ 8 ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಎಸ್.ಟಿ.ಸೋಮಶೇಖರ್ ಹೇಳಿಕೆ ಬೆನ್ನಲ್ಲೇ ಇದೀಗ ಬಿಜೆಪಿಯಿಂದ ಮಾನಸಿಕವಾಗಿ ವಿಮುಖರಾಗಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಿನ್ನಮತೀಯ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವ ಕುರಿತು ಸುಳಿವು ನೀಡಿದ್ದಾರೆ.

ಇಂದು ಸಂಜೆ ಯಲ್ಲಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಸ್.ಟಿ.ಸೋಮಶೇಖರ್ ಮಾತು ಸತ್ಯ ಇರಬಹುದು. ಸೋಮಶೇಖರ್ ಅವರ ಮಾತು ನೋಡಿದರೆ ಅವರಿಗೆ ಖಚಿತ ಮಾಹಿತಿ ಇರಬಹುದು. ಹಾಗಾಗಿ, ಸೋಮಶೇಖರ್ ಮಾತಿನಲ್ಲಿ ಸತ್ಯತೆ ಇರುತ್ತದೆ ಎಂದು ಹೇಳಿದ್ದಾರೆ
ಈ ಬಗ್ಗೆ ಮಾತನಾಡಲು ಸೋಮಶೇಖರ್ ಅವರಿಗೆ ಪೋನ್ ಕರೆ ಮಾಡಿದ್ದೆ, ಆದ್ರೆ ಕರೆಗೆ ಸಿಕ್ಕಿಲ್ಲ. ನಾನು ಬಿಜೆಪಿಯಿಂದ ಒಂದು ಕಾಲನ್ನು ಹೊರಗೆ ಇಟ್ಟಿದ್ದೇನೆ ಅಂತಾನಾದ್ರೂ ಬರೆದುಕೊಳ್ಳಿ, ಎರಡು ಕಾಲು ಹೊರಗೆ ಇಟ್ಟಿದ್ದೇನೆ ಅಂತಾನಾದ್ರೂ ಬರೆದುಕೊಳ್ಳಿ, ನಿಮ್ಮ ವಿವೇಚನೆಗೆ ಸೇರಿದ್ದು. ನಮ್ಮ ನಿರ್ಣಯ ನಮ್ಮ ಮುಖಂಡರ ಜತೆ ಚರ್ಚೆ ಮಾಡಿ ತೆಗೆದುಕೊಳ್ಳುತ್ತೇನೆ. ಇದು ರಾಜಕಿಯ ಕ್ಷೇತ್ರ, ಯಾವ ಸಂದರ್ಭ, ಯಾವ ನಿರ್ಣಯ ಕೈಗೊಳ್ಬೇಕು ಎಂಬುದು ನಮಗೆ ಗೊತ್ತು ಎಂದು ತಿಳಿಸಿದ್ದಾರೆ.

ಉಪಚುನಾವಣೆಗೆ ಕಾಲ ಪಕ್ವವಾಗಿಲ್ಲ. ನಾನು ಯಾವ ಪಕ್ಷದ ಚುನಾವಣೆ ಪ್ರಚಾರಕ್ಕೂ ಹೋಗಿಲ್ಲ. ಬೊಮ್ಮಾಯಿ ಅವರು ನನಗೆ ಆತ್ಮೀಯರಾಗಿದ್ದು, ಪ್ರಚಾರಕ್ಕೆ ಕರೆದರೆ ಆಲೋಚನೆ ಮಾಡಿ ನಿರ್ಣಯಿಸುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಮುಡಾ ಪ್ರಕರಣ ನ್ಯಾಯಾಂಗ ತನಿಖೆಯಲ್ಲಿದ್ದು, ಸತ್ಯಾಸತ್ಯತೆ ಗೊತ್ತಾಗುತ್ತದೆ. ಈ ಪ್ರಕರಣದ ಬಗ್ಗೆ ನಾವು ಮಾತನಾಡುವುದಿಲ್ಲ. ಸಿದ್ದರಾಮಯ್ಯ ಅವರು ಸಾರ್ವಜನಿಕ ಜೀವನದಲ್ಲಿ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ. ಅವರು ಯಾವತ್ತೂ ಇಂತಹ ಆರೋಪಗಳಿಗೆ ಒಳಗಾಗಿಲ್ಲ. ಸಿದ್ಧರಾಮಯ್ಯ ಮೇಲಿರುವ ಆರೋಪ ನ್ಯಾಯಾಂಗ ತನಿಖೆಯಿಂದ ಗೊತ್ತಾಗುತ್ತೆ. ಸಿಎಂ ಅವರು ಒಬ್ಬರೇ ತೆಗೆದುಕೊಂಡಿದ್ದಾರಾ? ಬೇರೆ ಬೇರೆ ರಾಜಕೀಯ ಮುಖಂಡರು ತೆಗೆದುಕೊಂಡಿದ್ದಾರಾ ಎಂಬುದು ಗೊತ್ತಾಗಲಿದೆ ಎಂದರು.