
ಉಡುಪಿ: ಉಡುಪಿಯ ರಾಷ್ಟ್ರಪ್ರಶಸ್ತಿ ವಿಜೇತ ಈಜುಪಟು ಗಂಗಾಧರ ಜಿ. ಅವರು ಜನವರಿ 24ರಂದು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಒಂದು ಕಿಲೋಮೀಟರ್ ಈಜಿ ನೂತನ ದಾಖಲೆ ನಿರ್ಮಿಸಲಿದ್ದಾರೆ.
ಈ ಸಂಬಂಧ ಇಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಜನವರಿ 24 ರಂದು ಬೆಳಿಗ್ಗೆ ಎಂಟು ಗಂಟೆಗೆ ಕಡಲ ಕಿನಾರೆಯಲ್ಲಿ ಒಂದು ಕಿಲೋಮೀಟರ್ ಈಜುವ ಮೂಲಕ ಇಂಡಿಯ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ನಿರ್ಮಿಸುವುದಾಗಿ ಹೇಳಿದ್ದಾರೆ. ಗಂಗಾಧರ ಜಿ. ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2009ರಿಂದ 2019ರವರೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 31 ಚಿನ್ನ, 16 ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ಹೆಗ್ಗಳಿಕೆ ಇವರದು. ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದ ಹೆಗ್ಗಳಿಕೆ ಇವರದು.
ಇದೇ ಭಾನುವಾರದಂದು 65 ರ ಹರೆಯದ ಗಂಗಾಧರ ಇಂಡಿಯ ಬುಕ್ ಅಫ್ ರೆಕಾರ್ಡ್ಸ್ ಗಾಗಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಹಾಕಿ ಈಜುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ