
ಮಂಗಳೂರು: ಮಂಗಳೂರಿನಲ್ಲಿ ನಿಗಧಿಯಾಗಿ ಸ್ಥಳ ಪರಿಶೀಲನೆಯಾಗಿದ್ದ ಆರ್‍ಎಎಫ್ ಬೇಸ್ ಕ್ಯಾಂಪ್ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡು, ಶಿಲಾನ್ಯಾಸ ಕೂಡಾ ಆಗಿದೆ. ಈ ಸಂದರ್ಭದಲ್ಲಿ ನಳಿನ್ ಕುಮಾರ್ ಸಹಿತ ಇಲ್ಲಿನ ಬಿಜೆಪಿ ಶಾಸಕರು ಏನು ಮಾಡುತ್ತಿದ್ದರು ಎಂದು ಮಿಥುನ್ ರೈ ಪ್ರಶ್ನಿಸಿದ್ದಾರೆ.
ಬಿಜೆಪಿ ಮತ್ತು ಕೇಂದ್ರ ಸರಕಾರ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಅವರಿಗೆ ಈ ಜಿಲ್ಲೆಯ ಮೇಲೆ ಅಸಡ್ಡೆ ಇದ್ದಂತೆ ಕಾಣುತ್ತಿದೆ. ಇಲ್ಲಿನ ಮತದಾರರನ್ನು ಕೇವಲ ಮತ ಹಾಕಲು ಬಳಸಿಕೊಳ್ಳುವ ಬಿಜೆಪಿ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ತರುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಬ್ಯಾಂಕ್‍ಗಳ ವಿಲೀನ, ಇನ್‍ಕಂ ಟ್ಯಾಕ್ಸ್ ಕಚೇರಿಯ ಸ್ಥಳಾಂತರ ಮೊದಲಾದ ಅನ್ಯಾಯವನ್ನು ಜಿಲ್ಲೆಗೆ ಬಿಜೆಪಿಗರು ಮಾಡುತ್ತಾ ಬಂದಿದ್ದು, ಇದೀಗ ನಮಗೆ ನಿಗಧಿಯಾಗಿದ್ದ ಆರ್‍ಎಎಫ್ ಕೂಡಾ ಕೈ ತಪ್ಪಿದೆ. ಹೀಗಾಗಲು ನಮ್ಮ ಸಂಸದರು ಶಿವಮೊಗ್ಗ ಸಂಸದರಿಗಿಂತಲೂ ದುರ್ಬಲರೇ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಆರ್‍ಎಎಫ್ ಬೇಸ್ ಕ್ಯಾಂಪ್‍ನ ಅಗತ್ಯತೆ ಇತ್ತು, ಆದರೆ ಇಲ್ಲಿನ ಬಿಜೆಪಿಯ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಕೈ ತಪ್ಪಿದ ಎಂದು ಆರೋಪಿಸಿದರು.