ನವದೆಹಲಿ: ಹರ್ಯಾಣದಲ್ಲಿ ಬಿಜೆಪಿ (BJP) ಮುನ್ನಡೆಗೆ ಆಪ್ (AAP) ಕಾರಣಾವಾಯ್ತಾ ಎಂಬ ವಿಶ್ಲೇಷಣೆ ಈಗ ಆರಂಭವಾಗಿದೆ.
ಹೌದು. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಮತಗಳು ಆಪ್ ಬಿದ್ದ ಕಾರಣ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮಧ್ಯಾಹ್ನ 12 ಗಂಟೆ ಟ್ರೆಂಡ್ ಪ್ರಕಾರ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಬಿಜೆಪಿ 49, ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ 39.07%, ಕಾಂಗ್ರೆಸ್ 40.26% ಮತ ಪಡೆದಿದೆ. ಐಎನ್‌ಎಲ್‌ಡಿ 4.09%, ಆಪ್ 1.64%, ಬಿಎಸ್‌ಪಿ 1.66% ಮತ ಪಡೆದಿದೆ.
ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಆಪ್ ಮೈತ್ರಿ ಮಾತುಕತೆ ನಡೆದಿತ್ತು. ಮಾತುಕತೆಯ ವೇಳೆ ಆಪ್ 10 ಕ್ಷೇತ್ರಗಳನ್ನು ಕೇಳಿದ್ದರೆ ಕಾಂಗ್ರೆಸ್ 3 ಕ್ಷೇತ್ರಗಳನ್ನು ಮಾತ್ರ ನೀಡುವುದಾಗಿ ಹೇಳಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು

ಮಾತುಕತೆ ವಿಫಲವಾದ ಬೆನ್ನಲ್ಲೇ ಕಾಂಗ್ರೆಸ್ 89 ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಿದರೆ ಆಪ್ 88 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಇಳಿಸಿತ್ತು. ಕಾಂಗ್ರೆಸ್ ಸಿಪಿಐ(ಎಂ) ಜೊತೆ ಮೈತ್ರಿ ಮಾಡಿಕೊಂಡು 1 ಕ್ಷೇತ್ರ ನೀಡಿದಿತ್ತು. ಬಿಜೆಪಿ 89 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಿತ್ತು.

ದುಶ್ಯಂತ್ ಚೌಟಾಲ ಅವರ ಜೆಜೆಪಿ ಮತ್ತು ಚಂದ್ರಶೇಖರ ಅಜಾದ್ ಅವರ ಅಜಾದ್ ಸಮಾಜ್ ಪಾರ್ಟಿ ಮೈತ್ರಿ ಮಾಡಿಕೊಂಡಿತ್ತು. ಜೆಜೆಪಿ 66, ಅಜಾಜ್ ಸಮಾಜ್ ಪಕ್ಷ 12 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿತ್ತು.
ಹರ್ಯಾಣದಲ್ಲಿ ಒಟ್ಟು 90 ಕ್ಷೇತ್ರಗಳಿದ್ದು ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದೆ. ಬಿಜೆಪಿ 2014 ರಿಂದ ಅಧಿಕಾರದಲ್ಲಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿ 47 ರಲ್ಲಿ ಜಯಗಳಿಸಿದರೆ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.
2019 ರ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31, ದುಶ್ಯಂತ್ ಚೌಟಾಲ ವಾರ ಜೆಜೆಪಿ 10 ಸ್ಥಾನವನ್ನು ಗೆದ್ದುಕೊಂಡಿತ್ತು. ನಂತರ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಏರಿತ್ತು