ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಅ.3ರ ಗುರುವಾರದಿಂದ ಶಾಲಾ ಮಕ್ಕಳಿಗೆ ಮಧ್ಯಂತರ ರಜೆ ಆರಂಭವಾಗಬೇಕಿದ್ದರೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೆಲವು ಖಾಸಗಿ ಶಾಲೆಗಳು ಇನ್ನೂ ರಜೆ ನೀಡಿಲ್ಲ.

ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿ ಅನುಸಾರ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಬುಧವಾರ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಮಧ್ಯಂತರ ರಜೆಯ ಮಾಹಿತಿ ನೀಡಿ ಕಳಹಿಸಲಾಗಿದೆ. ಆದರೆ, ಕೆಲವು ಖಾಸಗಿ ಶಾಲೆಗಳಲ್ಲಿ ಮಾತ್ರ ಇನ್ನೂ ರಜೆ ನೀಡಿಲ್ಲ.

ವೇಳಾಪಟ್ಟಿ ಪ್ರಕಾರ ಇಷ್ಟೊತ್ತಿಗೆ ಪೂರ್ಣಗೊಳಿಸಬೇಕಿದ್ದ ಅರ್ಧವಾರ್ಷಿಕ ಪರೀಕ್ಷೆಯನ್ನು ಇನ್ನೂ ನಡೆಸುತ್ತಿರುವ ಖಾಸಗಿ ಶಾಲೆಗಳು, ಮುಂದಿನ ವಾರದಿಂದ ತಮ್ಮ ಶಾಲೆಯ ಮಕ್ಕಳಿಗೆ ರಜೆ ನೀಡುವುದಾಗಿ ಹೇಳಿವೆ. ಇದು ಪೋಷಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಿಯಮ ಪ್ರಕಾರ ಅ.3ರಿಂದ 20ರವರೆಗೆ 18 ದಿನ ರಜೆ ನೀಡಬೇಕು.

ಆದರೆ, ಒಂದು ವಾರ ತಡ ಮಾಡಿದರೆ ಮಕ್ಕಳಿಗೆ ರಜೆ ಅವಧಿ ಕಡಿತವಾಗಲಿದೆ. ಶೈಕ್ಷಣಿಕ ವರ್ಷದ ಮಧ್ಯೆ ಕೆಲವು ದಿನ ಕುಟುಂಬದೊಂದಿಗೆ ಪೂರ್ಣಾವಧಿ ಕಾಲ ಕಳೆಯುವುದು, ಪ್ರವಾಸ, ಸಂಬಂಧಿಕರ ಮನೆಗೆ ಬೇಟಿ ಸೇರಿದಂತೆ ಮತ್ತಿತರೆ ಅವಕಾಶಗಳಿಗೆ ಸಮಯ ಸಿಗದಂತಾಗಲಿದೆ ಎಂಬುದು ಪೋಷಕರ ವಲಯದ ಅಸಮಾಧಾನವಾಗಿದೆ.