ಇರಾನ್‌ನ ತಬಾಸ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 50 ಜನ ಸಾವನ್ನಪ್ಪಿದ್ದಾರೆ ಮತ್ತು 17ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮಿಥೇನ್ ಅನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಸ್ಫೋಟದ ನಂತರ ಮೂವರು ಗಣಿಯಲ್ಲೇ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇರಾನ್‌ನ ಗಣಿಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಈ ದುರಂತದಲ್ಲಿ 50 ಜನ ಸಾವನ್ನಪ್ಪಿದ್ದಾರೆ ಹಾಗೂ 17ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪೂರ್ವ ಇರಾನ್‌ನ ತಬಾಸ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಈ ದುರಂತ ಸಂಭವಿಸಿದೆ. ಮಿಥೇನ್ ಅನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಸ್ಫೋಟದ ನಂತರ ಮೂವರು ಗಣಿಯಲ್ಲೇ ಸಿಲುಕಿಕೊಂಡಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ವರದಿ ಮಾಡಿದೆ. ನಿನ್ನೆ ತಡರಾತ್ರಿ ತಬಾಸ್‌ನಲ್ಲಿ ಈ ದುರಂತ ಸಂಭವಿಸಿದೆ. ಇರಾನ್ ರಾಜಧಾನಿ ತೆಹ್ರಾನ್‌ನಿಂದ 540 ಕಿಲೋ ಮೀಟರ್ ದೂರದಲ್ಲಿ ಈ ದುರಂತ ಸಂಭವಿಸಿದೆ. ಅಂದಾಜು 70 ಜನ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಈ ಅನಾಹುತ ನಡೆದಿದೆ.

ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಹಾಗೂ ಗಾಯಾಳುಗಳ ಸಂಖ್ಯೆಯನ್ನು ರಾಜ್ಯ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಪ್ರಾಂತೀಯ ಗವರ್ನರ್ ಮೊಹಮ್ಮದ್ ಜಾವಾದ್ ಕೆನಾಟ್ ಖಚಿತಪಡಿಸಿದ್ದಾರೆ. ಇರಾನ್‌ನ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಗಣಿಯಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲು ಮತ್ತು ಅವರ ಕುಟುಂಬಗಳಿಗೆ ನೆರವು ನೀಡಲು ಆದೇಶಿಸಿದ್ದಾರೆ. ಘಟನೆ ಕುರಿತು ತನಿಖೆಗೂ ಆದೇಶಿಸಲಾಗಿದೆ. ತಬಾಸ್‌ನಲ್ಲಿರುವ ಕಲ್ಲಿದ್ದಲು ಗಣಿಯೊಂದರಲ್ಲಿ ಅನಾಹುತ ಸಂಭವಿಸಿದ್ದು, ನಮ್ಮ ಹಲವಾರು ದೇಶವಾಸಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಪೆಜೆಶ್ಕಿಯಾನ್ ಹೇಳಿದ್ದಾರೆ.

ಜಗತ್ತಿನ ಪ್ರಮುಖ ತೈಲ ಉತ್ಪಾದಕ ದೇಶಗಳಲ್ಲಿ ಒಂದಾಗಿರುವ ಇರಾನ್‌ನಲ್ಲಿ ಇತರ ಖನಿಜಗಳು ಕೂಡ ಹೇರಳವಾಗಿವೆ. ದೇಶದಲ್ಲಿ ಅದರಲ್ಲೂ ವಿಶೇಷವಾಗಿ ದೇಶದ ಸ್ಟೀಲ್ ಕಾರ್ಖಾನೆಗಳಲ್ಲಿ ಬಳಸಲು ವಾರ್ಷಿಕವಾಗಿ ಸುಮಾರು 3.5 ಮಿಲಿಯನ್ ಟನ್ ಕಲ್ಲಿದ್ದಲನ್ನು ಬಳಸುತ್ತದೆ. ಆದರೆ ಅಲ್ಲಿನ ಗಣಿಗಳು ವರ್ಷಕ್ಕೆ ಸುಮಾರು 1.8 ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲನ್ನು ಮಾತ್ರ ಉತ್ಪಾದಿಸುತ್ತವೆ. ಹೀಗಾಗಿ ಉಳಿದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
