ಕದನ ವಿರಾಮಕ್ಕೆ ಆಗ್ರಹಿಸಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ದ ಇಸ್ರೇಲ್‌ನಲ್ಲಿ ಬೃಹತ್ ಜನಾಂದೋಲನ ಶುರುವಾಗಿದೆ.
ಕಳೆದ ಭಾನುವಾರ ರಾಜಧಾನಿ ಟೆಲ್ ಅವೀವ್, ಜೆರುಸಲೇಂ ಮತ್ತು ಸಿಸೇರಿಯಾ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಸೋಮವಾರವೂ ಪ್ರತಿಭಟನೆ ಮುಂದುವರೆದಿದೆ. ಕೆಲ ಸಂಘಟನೆಗಳು ದೇಶದಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿವೆ.

ಗಾಝಾದಲ್ಲಿ ಹಮಾಸ್‌ನಿಂದ ಒತ್ತೆಯಾಳುಗಳಾಗಿದ್ದ ಆರು ಜನರ ಮೃತದೇಹವನ್ನು ಇಸ್ರೇಲ್ ಸೇನೆ ಇತ್ತೀಚೆಗೆ ಪತ್ತೆ ಹಚ್ಚಿತ್ತು. ಆ ಬಳಿಕ ನೆತನ್ಯಾಹು ಸರ್ಕಾರದ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಗಾಝಾ ಮೇಲೆ ನೆತನ್ಯಾಹು ಸರ್ಕಾರ ಆಕ್ರಮಣ ನಡೆಸುತ್ತಿರುವುದರಿಂದ ಹಮಾಸ್ ಒತ್ತೆಯಾಳುಗಳನ್ನು ಕೊಲ್ಲುತ್ತಿದೆ ಎಂಬುವುದು ಜನರ ಆರೋಪವಾಗಿದೆ.
ಭಾನುವಾರ ಸಿಸೇರಿಯಾದಲ್ಲಿರುವ ನೆತನ್ಯಾಹು ಅವರ ಖಾಸಗಿ ನಿವಾಸದ ಬಳಿ ಜಮಾಯಿಸಿದ ಜನರು “ನೀವು ನಾಯಕ, ನೀವೇ ತಪ್ಪಿತಸ್ಥರು” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಯುಎಸ್ ರಾಯಭಾರ ಕಚೇರಿ ಬಳಿಯೂ ಸೇರಿದ ಜನರು “ಶೇಮ್ ಶೇಮ್” ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

‘ಹಿಸ್ಟಾಡ್ರಟ್’ ಎಂಬ ಇಸ್ರೇಲ್‌ನ ಅತೀ ದೊಡ್ಡ ಕಾರ್ಮಿಕ ಸಂಘಟನೆ ಸೋಮವಾರ ದೇಶದಾದ್ಯಂತ ವ್ಯಾಪಾರ-ವಹಿವಾಟು ಸ್ಥಗಿತಕ್ಕೆ ಕರೆ ನೀಡಿತ್ತು. ಇದರ ಪರಿಣಾಮ ಟೆಲ್ ಅವೀವ್‌ನ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು
ಇನ್ನೂ 100ಕ್ಕೂ ಅಧಿಕ ಇಸ್ರೇಲಿಗರನ್ನು ಗಾಝಾದಲ್ಲಿ ಹಮಾಸ್ ಒತ್ತೆಯಾಳಾಗಿಟ್ಟುಕೊಂಡಿದೆ. ಈ ಪೈಕಿ 35 ಜನರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಮುಂದಿನ ಅಕ್ಟೋಬರ್ 7ಕ್ಕೆ ಇಸ್ರೇಲ್ -ಹಮಾಸ್ ಸಂಘರ್ಷ ಪ್ರಾರಂಭಗೊಂಡು ಒಂದು ವರ್ಷವಾಗಲಿದೆ. ಇಸ್ರೇಲ್ ದಾಳಿಯಿಂದ ಗಾಝಾದಲ್ಲಿ ಇದುವರೆಗೆ ಮೃತಪಟ್ಟ ನಾಗರಿಕ ಸಂಖ್ಯೆ 40,000 ದಾಟಿದೆ.

“ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ನಾವು ಸಿದ್ದ” ಎಂದಿರುವ ಹಮಾಸ್, ಕದನ ವಿರಾಮ, ಇಸ್ರೇಲ್ ಪಡೆಗಳು ಗಾಝಾ ಬಿಟ್ಟು ತೆರಳುವುದು, ಗಾಝಾದ ಸಶಸ್ತ್ರ ಗುಂಪುಗಳ ಉನ್ನತ ಸದಸ್ಯರನ್ನು ಒಳಗೊಂಡಂತೆ ಬಂಧನದಲ್ಲಿರುವ ಪ್ಯಾಲೇಸ್ತೀನಿಯರ ಬಿಡುಗಡೆ ಇತ್ಯಾದಿ ಷರತ್ತುಗಳನ್ನು ಮುಂದಿಟ್ಟಿದೆ.
ಕದನ ವಿರಾಮಕ್ಕೆ ಒತ್ತಾಯಿಸುವ ಅನೇಕ ನಿರ್ಣಯಗಳನ್ನು ವಿಶ್ವಸಂಸ್ಥೆ ಈಗಾಗಲೇ ಅಂಗೀಕರಿಸಿದೆ. ಅನೇಕ ರಾಷ್ಟ್ರಗಳು ದಾಳಿ ನಿಲ್ಲಿಸುವಂತೆ ಇಸ್ರೇಲ್‌ಗೆ ಒತ್ತಾಯಿಸಿವೆ. ಆದರೆ, ಅವುಗಳನ್ನು ಪರಿಗಣಿಸದ ಇಸ್ರೇಲ್, ಗಾಝಾದಲ್ಲಿ ಆಕ್ರಮಣ ಮುಂದುವರೆಸಿದೆ. ಯಾರ ಮಾತೂ ಕೇಳದ ಇಸ್ರೇಲ್ ಸರ್ಕಾರದ ವಿರುದ್ದ ಅಲ್ಲಿನ ಜನರೇ ದಂಗೆಯೆದ್ದಿದ್ದಾರೆ.
