ಮೌಲ್ವಿ ಶೇಖ್ ಎ. ಪಿ ಅಬೂಬಕರ್ ಮುಸ್ಲಿಯಾರ್ ಸರ್ಕಾರದ ಕಾರಿನಲ್ಲಿ ಸಿಎಂ ಕಾನ್ವೆನ್ಶನ್ನಲ್ಲಿ ನಡೆದ ಸುನ್ನಿ ಕೋಆರ್ಡಿನೇಷನ್ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಆಗಸ್ಟ್ 06: ಬೆಂಗಳೂರಿನ (Bengaluru) ಸಿಎಂ ಕಾನ್ವೆನ್ಶನ್ನಲ್ಲಿ ನಡೆದ ಸುನ್ನಿ ಕೋಆರ್ಡಿನೇಷನ್ ಕಾರ್ಯಕ್ರಮಕ್ಕೆ ಮುಸ್ಲಿಂ ಮೌಲ್ವಿ ಬಂದಿದ್ದು, ಇದಕ್ಕೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೌಲ್ವಿ ಶೇಖ್ ಎ. ಪಿ ಅಬೂಬಕರ್ ಅಹ್ಮದ್ (Sheikh Abubakar Ahmed) ಸರ್ಕಾರದ “ಜಿ” ಸಿರೀಸ್ನ ಕಾರಿನಲ್ಲಿ ಪೊಲೀಸ್ ಭದ್ರತೆಯಲ್ಲಿ ಬಂದಿದ್ದರು. ಮೌಲ್ವಿ ಶೇಖ್ ಅಬೂಬಕರ್ ಅಹ್ಮದ್ ಸರ್ಕಾರದ ಕಾರಿನಲ್ಲಿ ಬಂದಿರುವ ವಿಡಿಯೋವನ್ನು ಶಾಸಕ ಯತ್ನಾಳ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಸಂಬಂಧವಿಲ್ಲದ ವ್ಯಕ್ತಿಗೆ ಪೊಲೀಸ್ ಭದ್ರತೆ ಹಾಗೂ ಪೊಲೀಸ್ ಭದ್ರತೆ ಮತ್ತು ಪ್ರೊಟೋಕಾಲ್ ಅನ್ನು ನೀಡಲಾಗಿದೆ. ಅಲ್ಲದೆ, “ಜಿ” ಸಿರಿಸ್ನ ಸರ್ಕಾರಿ ಕಾರಿನಲ್ಲಿ ಏಕೆ ಬಂದರು? ಇದು ಶಿಷ್ಟಾಚಾರದ ನಿಯಮಗಳ ಉಲ್ಲಂಘನೆಯಲ್ಲವೇ? ಎಂದು ಸರ್ಕಾರಕ್ಕೆ ಯತ್ನಾಳ್ ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರ ಮತಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಮುಖಂಡರಿಗೆ ಅನುಕೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲದೆ ತೆರಿಗೆದಾರರ ಹಣ ವ್ಯರ್ಥವೂ ಆಗಿದೆ. ರಾಜ್ಯವು ಮಳೆಯ ಅಬ್ಬರಕ್ಕೆ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರ ಈ ರೀತಿ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದರು.
