ಸೋಮವಾರ (ಆ.5) ಪ್ರಧಾನಿ ಶೇಖ್ ಹಸೀನಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದ ಬೆನ್ನಲ್ಲೇ, ಬಾಂಗ್ಲಾದೇಶದ ಸೇನೆ ದೇಶದ ಅಧಿಕಾರ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಈ ನಡುವೆ ಮಾಜಿ ಪ್ರಧಾನಿ ಹಾಗೂ ಪ್ರತಿಪಕ್ಷ ನಾಯಕಿ ಖಾಲಿದಾ ಝಿಯಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಆದೇಶಿಸಿದ್ದಾರೆ.

ಅಧ್ಯಕ್ಷ ಶಹಾಬುದ್ದೀನ್ ನೇತೃತ್ವದ ಸಭೆಯಲ್ಲಿ “ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಝಿಯಾ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರ ಪತ್ರಿಕಾ ತಂಡ ಹೇಳಿಕೆಯಲ್ಲಿ ತಿಳಿಸಿದೆ.

ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ 2018ರಲ್ಲಿ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 78 ವರ್ಷ ವಯಸ್ಸಿನ ಝಿಯಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಸೀಮಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿತರಾಗಿರುವ ಎಲ್ಲಾ ಜನರನ್ನೂ ಬಿಡುಗಡೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಸೇನಾ ಮುಖ್ಯಸ್ಥ ಜನರಲ್ ವಕಾರುಝ್ಝಮಾನ್, ನೌಕಾಪಡೆ ಮತ್ತು ವಾಯುಪಡೆಗಳ ಮುಖ್ಯಸ್ಥರು, ಬಿಎನ್‌ಪಿ, ಜಮಾತ್-ಎ-ಇಸ್ಲಾಮಿ ಸೇರಿದಂತೆ ಹಲವು ವಿರೋಧ ಪಕ್ಷಗಳ ಉನ್ನತ ನಾಯಕರು ಅಧ್ಯಕ್ಷರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು.

ಸೋಮವಾರದ ಬಾಂಗ್ಲಾದೇಶದ ಸರ್ಕಾರಿ ಮಾಲಿಕತ್ವದ ದೂರದರ್ಶನದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಸೇನಾ ಮುಖ್ಯಸ್ಥ, ಪ್ರಧಾನಿ ಶೇಖ್ ಹಸೀನಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ. ಹೀಗಾಗಿ, ಸೇನೆಯು ಮಧ್ಯಂತರ ಸರ್ಕಾರ ರಚಿಸಲಿದೆ ಎಂದಿದ್ದರು.
ವರದಿಗಳ ಪ್ರಕಾರ, ಇಂದು ಬಾಂಗ್ಲಾ ಸಂಸತ್ತನ್ನು ವಿಸರ್ಜಿಸಿ ಸೇನೆಯ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ ನಡೆಯಲಿದೆ.