ಇಂದು ಕೇರಳದ ವಯನಾಡಿನಲ್ಲಿ ಭಾರೀ ಮಳೆಯಿಂದಾಗಿ ಭೂ-ಕುಸಿತ ಸಂಭವಿಸಿದ್ದು ಸಾವಿನ ಸಂಖ್ಯೆ 70ಕ್ಕೆ ಏರಿಕೆ ಆಗಿದೆ. ಜೊತೆಗೆ ಮಣ್ಣಿನ ಅಡಿಯಲ್ಲಿ ನೂರಾರು ಮಂದಿ ಜೀವಂತ ಸಮಾಧಿ ಆಗಿರುವ ಆತಂಕ ವ್ಯಕ್ತವಾಗುತ್ತಿದೆ. ರಕ್ಕಸ ಮಳೆಯಾರ್ಭಟಕ್ಕೆ ಕೇರಳದ ವಯನಾಡು ಅಕ್ಷರಶಃ ಸ್ಮಶಾನವಾಗಿದೆ.


ಮುಂಡಕ್ಕೈ (Mundakkai), ಚೂರಲ್ಮಲಾ (Chooralmala), ಅಟ್ಟಮಾಲಾ ( Attamala) ಮತ್ತು ನೂಲ್ಪುಝಾ (Noolpuzha) ಒಟ್ಟು ನಾಲ್ಕು ಗ್ರಾಮದಲ್ಲಿ ಭೂಕುಸಿತ ಆಗಿದೆ. ಮುಂಡಕೈ ಮದರಸಾ ಬಳಿ 150 ಮಂದಿ ಸಿಲುಕಿಕೊಂಡಿದ್ದಾರೆ. ಮುಂಡಕೈ ಮದರಸಾ ಬಳಿ ಸುಮಾರು 50 ಮನೆಗಳು ಮಣ್ಣಿನಡಿ ಸಿಕ್ಕಿಹಾಕಿಕೊಂಡಿದೆ. ಹೀಗಾಗಿ ಸ್ಥಳದಲ್ಲಿ ರಕ್ಷಣಾ ತಂಡಗಳು ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಸ್ಥಳೀಯ ತಂಡಗಳು ಸೇರಿ ಸುಮಾರು 250 ಜನರು ರಕ್ಷಣೆ ಮಾಡಲು ಮುಂದಾಗಿದ್ದಾರೆ.

ಇನ್ನು ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಕೂಡ ತಲುಪಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ವಾಯುಪಡೆಯ ಹೆಲಿಕಾಪ್ಟರ್ ಅನ್ನು ವಾಪಸ್ ಕಳುಹಿಸಲಾಗಿದೆ. ಇಂದು ಸಂಜೆ 5 ಗಂಟೆಯ ಒಳಗೆ ರಕ್ಷಣಾ ಕಾರ್ಯಾಚರಣೆ ಮಾಡಬೇಕು. ಸಂಜೆ ಐದು ಗಂಟೆ ನಂತರ ಇಲ್ಲಿ ಕತ್ತಲು ಆವರಿಸಲಿದೆ. ಕತ್ತಲಾಗುತ್ತಿದ್ದಂತೆ ಸ್ಥಳೀಯರನ್ನು ರಕ್ಷಣೆ ಮಾಡುವುದು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಹೀಗಾಗಿ ಕತ್ತಲು ಆವರಿಸುವ ಮುನ್ನವೆ ವಯನಾಡಿನ ಮಣ್ಣಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಣೆ ಮಾಡಬೇಕು.


ಈ ಬಗ್ಗೆ ಕಲ್ಪಟ್ಟಾ ಶಾಸಕ ಟಿ. ಸಿದ್ದಿಕ್ ಮಾಹಿತಿ ಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿದ್ದ ಆರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ, ಎನ್ಡಿಆರ್ಎಫ್ ತಂಡಗಳು ಹಗ್ಗಗಳನ್ನು ಕಟ್ಟಿ ಸ್ಥಳೀಯ ನಿವಾಸಿಗಳ ಜೀವ ರಕ್ಷಣೆ ಮಾಡುತ್ತಿದ್ದಾರೆ. ಮುಂಡಕೈ ಎರಡು ವಾರ್ಡ್‌ಗಳಲ್ಲಿ ಸುಮಾರು 3000 ಜನಸಂಖ್ಯೆಯನ್ನು ಹೊಂದಿದೆ. ಮುಂಡಕೈಯಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಮೃತ ದೇಹಗಳು ಚಾಲಿಯಾರ್ ಮೂಲಕ ತೇಲಿ ಬಂದು ನಿಲಂಬೂರ್ ತಲುಪಿವೆ ಎಂದು ವರದಿಯಾಗಿದೆ. ಇಲ್ಲಿ ಎರಡು ಬಾರಿ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎರಡನೇ ಭೂಕುಸಿತ ಸಂಭವಿಸಿದೆ ಎಂದಿದ್ದಾರೆ.
