ಕೇರಳ: ಕೊಡಗಿನಲ್ಲಿ 2018ರಲ್ಲಿ ನಡೆದ ಜಲಸ್ಫೋಟದಂತೆ ಕೇರಳದಲ್ಲೂ ದುರಂತ ಸಂಭವಿಸಿದೆ. ಮಂಗಳವಾರ ಮುಂಜಾನೆ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಗುಡ್ಡ ಕುಸಿದಿದೆ. ಈ ದುರಂತದಲ್ಲಿ ಈಗ ಬಂದ ಮಾಹಿತಿ ಪ್ರಕಾರ 36ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ನಸುಕಿನ ಜಾವ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದರೆ ಮುಂಜಾನೆ 4:10ರ ವೇಳೆ ಎರಡನೇ ಬಾರಿ ಸಂಭವಿಸಿದೆ. ಜಲಸ್ಫೋಟದಿಂದಾಗಿ ಗುಡ್ಡದಿಂದ ನೀರು ರಭಸವಾಗಿ ಮನೆಗಳ ಮೇಲೆ ಹರಿದು ಹೋಗಿದ್ದರಿಂದ ಸಾವು ನೋವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ.

ವಯನಾಡು ಜಿಲ್ಲೆಯ ಅಧಿಕಾರಿಗಳ ಪ್ರಕಾರ ತೊಂಡರ್ನಾಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತವೊಂದರಲ್ಲಿ ಸಾವನ್ನಪ್ಪಿದೆ. ಭಾರೀ ಭೂಕುಸಿತದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ.

