ಮಂಗಳೂರು: ನಗರದ ಲೇಡಿಹಿಲ್ ಮಣ್ಣಗುಡ್ಡೆ ರಸ್ತೆ ಮತ್ತು ಕೆಪಿಟಿಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬೀದಿ ಬದಿ ಗೂಡಂಗಡಿಗಳನ್ನು ಮಹಾನಗರ ಪಾಲಿಕೆಯ ವತಿಯಿಂದ ಸೋಮವಾರ ತೆರವುಗೊಳಿಸಲಾಯಿತು. ಮೊದಲಿಗೆ ಲೇಡಿಹಿಲ್ ಬಳಿ ಸುಮಾರು 25-30 ಅಂಗಡಿಗಳನ್ನು ಬೀದಿಬದಿಯಿಂದ ತೆರವುಗೊಳಿಸಲಾಯಿತು.





ಈ ಮಧ್ಯೆ ಕಾರ್ಯಾಚರಣೆಗೆ ಬೀದಿಬದಿ ವ್ಯಾಪಾರಿಗಳ ಸಂಘ ತೀವ್ರ ಪ್ರತಿರೋಧ ಒಡ್ಡಿದೆ. ಅಲ್ಲದೆ ಬರ್ಕೆ ಠಾಣೆಯ ಎದುರು ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ಕೂಡಾ ನಡೆಸಿದರು. ಈ ವೇಳೆ ಸಂಘದ ಪ್ರಮುಖರಾದ ಮುಹಮ್ಮದ್ ಮುಸ್ತಫ, ಹರೀಶ್ ಪೂಜಾರಿ, ರಿಯಾಝ್, ರಹ್ಮಾನ್, ಆಸಿಫ್ ಉರುಮಣೆ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೊಂಡ, ಫಾಸ್ಟ್ ಫುಡ್, ಜ್ಯೂಸ್, ಪಾನಿಪುರಿ, ಆಮ್ಲೆಟ್ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಪಾಲಿಕೆ ಉಪ ಆಯುಕ್ತೆ ರೇಖಾ ಶೆಟ್ಟಿ, ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ, ಕಂದಾಯ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಬರ್ಕೆ, ಕದ್ರಿ ಠಾಣೆ ಪೊಲೀಸರು ಉಪಸ್ಥಿತರಿದ್ದು, ಭದ್ರತೆ ಒದಗಿಸಿದರು.