ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಈವರೆಗೂ ಮಾಧ್ಯಮ ಅಕಾಡೆಮಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಯಾವ ಮುಖ್ಯಮಂತ್ರಿಗಳೂ ನೇಮಿಸಿಲ್ಲ. ಈ ಕೊರತೆಯನ್ನು ಇದೀಗ ಸಿದ್ದರಾಮಯ್ಯ ಸರ್ಕಾರ ನೀಗಿಸಿದೆ

ಬೆಂಗಳೂರು, (ಜುಲೈ 10): ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಿಶೇಷವಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನಿರಂತರವಾಗಿ ವೃತ್ತಿಪರತೆ ಕಾಪಾಡಿಕೊಂಡು ಬಂದಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮಹಿಳಾ ಪ್ರತಿನಿಧಿಯೊಬ್ಬರು ಅಲಂಕರಿಸುತ್ತಿದ್ದಾರೆ

ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರಿಗೆ ಮಾಧ್ಯಮಗಳಲ್ಲಿ 20 ವರ್ಷಕ್ಕಿಂತ ಹೆಚ್ಚು ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ದಿ ಏಷಿಯನ್ ಏಜ್, ಸ್ಟಾರ್ ನ್ಯೂಸ್, ಆಜ್ ತಕ್, ದೂರದ ದರ್ಶನದಲ್ಲಿ ಹೀಗೆ ವಿವಿಧ ಮಾಧ್ಯಮಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ

ಇವತ್ತಿನವರೆಗೂ ಮಾಧ್ಯಮ ಅಕಾಡೆಮಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಯಾವ ಮುಖ್ಯಮಂತ್ರಿಗಳೂ ನೇಮಿಸಿಲ್ಲ. ಈ ಕೊರತೆಯನ್ನು ನೀವು ಅಳಿಸಿದಂತಾಗುತ್ತದೆ. ಜೊತೆಗೆ ಆಯೇಷಾ ಅವರು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯವರಾಗಿರುವುದರಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ಸಮಾನತೆಗೂ ಮಾನ್ಯತೆ ಕೊಟ್ಟಂತಾಗುತ್ತದೆ ಎನ್ನುವುದು ಕೆ.ವಿ.ಪ್ರಭಾಕರ್ ಅವರ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯಕ್ಕೆ ಸಂಪೂರ್ಣ ಮನ್ನಣೆ ನೀಡಿದ ಸಿಎಂ ಸಿದ್ದರಾಮಯ್ಯ, ಇತರೆ ಹಲವು ಅರ್ಹರ ಹೆಸರುಗಳ ನಡುವೆ ಆಯೇಷಾ ಅವರನ್ನು ಹೆಚ್ಚು ಅರ್ಹರು ಎಂದು ತೀರ್ಮಾನಿಸಿ ಆದೇಶ ಹೊರಡಿಸಲು ಸೂಚಿಸಿದರು.
