ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಓಂ ಬಿರ್ಲಾ(Om Birla) ಅವರು ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
Lok Sabha Speaker: 18ನೇ ಲೋಕಸಭೆಯ ಸ್ಪೀಕರ್ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಜೆಪಿ ಸಂಸದ ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇಂಡಿ ಬಣದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ ಭಾರೀ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಓಂ ಬಿರ್ಲಾ ಗೆಲುವಿನ ನಗೆ ಬೀರಿದ್ದಾರೆ

ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಎನ್‌ಡಿಎಯಿಂದ ಕಣಕ್ಕಿಳಿದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಅವರು ಸ್ಪೀಕರ್ ಆಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ (Lok Sabha Speaker). ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇಂಡಿ ಬಣದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಕಣಕ್ಕಿಳಿದಿದ್ದರು. ಭಾರೀ ಕುತೂಹಲ ಮೂಡಿಸಿದ್ದ ಈ ಐತಿಹಾಸಿಕ ಚುನಾವಣೆಯಲ್ಲಿ ಇದೀಗ ಓಂ ಬಿರ್ಲಾ ಗೆಲುವಿನ ನಗೆ ಬೀರಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಓಂ ಬಿರ್ಲಾ ಅವರು ಬಹುಮತಗಳನ್ನು ಪಡೆದುಕೊಂಡರು. ಈ ಮೂಲಕ ಓಂ ಬಿರ್ಲಾ ಅವರು ಬಲರಾಮ್ ಜಖರ್ (1980-89) ನಂತರ ಎರಡು ಪೂರ್ಣ ಅವಧಿಗೆ ಆಯ್ಕೆಯಾದ ಎರಡನೇ ಸ್ಪೀಕರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಲೋಕಸಭೆಯ ಎರಡನೇ ಸ್ಪೀಕರ್ ಎಂ.ಎ.ಅಯ್ಯಂಗಾರ್ ಮತ್ತು ಗುರ್ದಿಯಾಲ್ ಸಿಂಗ್ ಧಿಲ್ಲಾನ್ ಈ ಹಿಂದೆ ಎರಡು ಬಾರಿ ಈ ಹುದ್ದೆಯನ್ನು ಆಯ್ಕೆಯಾಗಿದ್ದರೂ ಅವರ ಎರಡನೇ ಅವಧಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ಉಳಿದಿರಲಿಲ್ಲ. ಹಂಗಾಮಿ ಸ್ಪೀಕರ್ ಭಾರ್ತೃಹರಿ ಮಹತಾಬ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು

ವಿಪ್ ಜಾರಿ
ಆರಂಭದಲ್ಲಿ ಎನ್‌ಡಿಎ ಪ್ರತಿಪಕ್ಷಗಳ ಮನವೊಲಿಸಲು ಯತ್ನಿಸಿತ್ತು. ಓಂ ಬಿರ್ಲಾ ಅವರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿದ್ದ ಇಂಡಿ ಬಣ ಡೆಪ್ಯುಟಿ ಸ್ಪೀಕರ್ ತಮಗೆ ಸಿಗಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮಾತುಕತೆ ಮುರಿದು ಬಿದ್ದು ಕೊನೆಯ ಕ್ಷಣದಲ್ಲಿ ಕೊಂಡಿಕುನಾಲ್ ಸುರೇಶ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ಸದಸ್ಯರಿಗೆ ಹಾಜರಾಗುವಂತೆ ಮಂಗಳವಾರ ವಿಪ್ ಜಾರಿ ಮಾಡಿದ್ದವು

ಕೊನೆ ಕ್ಷಣದಲ್ಲಿ ಸುರೇಶ್‌ಗೆ ಬೆಂಬಲ ಸೂಚಿಸಿದ ಟಿಎಂಸಿ
ಇಂಡಿ ಬಣ ಅಭ್ಯರ್ಥಿಯಾಗಿ ಕೆ.ಸುರೇಶ್ ಅವರನ್ನು ಆಯ್ಕೆ ಮಾಡುವ ಮುನ್ನ ತಮ್ಮ ಬಳಿ ಸಮಾಲೋಚನೆಯನ್ನೇ ನಡೆಸಿಲ್ಲ ಎಂದು ಟಿಎಂಸಿ ಮಂಗಳವಾರ ಆರೋಪಿಸಿತ್ತು. ಕೆ. ಸುರೇಶ್ ಅವರನ್ನು ಇಂಡಿ ಬಣ ಜಂಟಿ ನಾಮನಿರ್ದೇಶಿತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರತಿಪಕ್ಷಗಳ ನಿರ್ಧಾರದ ಬಗ್ಗೆ ನಮ್ಮ ಪಕ್ಷದ ನಾಯಕರ ಬಳಿ ಸಮಾಲೋಚನೆ ನಡೆಸಿಲ್ಲ. ದುರದೃಷ್ಟವಶಾತ್ ಇದು ಏಕಪಕ್ಷೀಯ ನಿರ್ಧಾರ ಎಂದು ಟಿಎಂಸಿ ಹೇಳಿ ಇಂಡಿ ಬಣವನ್ನು ಆತಂಕಕ್ಕೆ ದೂಡಿತ್ತು. ಆದರೆ ಕೊನೆಕ್ಷಣದಲ್ಲಿ ಟಿಎಂಸಿ ಸದಸ್ಯರು ಸುರೇಶ್ ಅವರಿಗೆ ಬೆಂಬಲ ಸೂಚಿಸಿದರು
ಏಳು ಸಂಸದರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ ಮತ್ತು ಕೇರಳದ ವಯನಾಡು ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಕಾರಣ 535 ಸಂಸದರು ಇಂದು ಮತ ಚಲಾಯಿಸಿದ್ದರು. ಹೀಗಾಗಿ ಬಹುಮತಕ್ಕೆ 268 ಸದಸ್ಯರ ಬೆಂಬಲ ಅಗತ್ಯವಿತ್ತು. ಓಂ ಬಿರ್ಲಾ ಅವರಿಗೆ ಎನ್‌ಡಿಎ ಜತೆಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷ, ಇತರರು ಬೆಂಬಲ ಸೂಚಿಸಿದ್ದರಿಂದ ಸುಲಭವಾಗಿ 300ಕ್ಕೆಂತ ಹೆಚ್ಚು ಮತ ಪಡೆದುಕೊಂಡರು