
ಬಿಜೆಪಿ ನಾಯಕ ಸುರೇಶ್ ಗೋಪಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಪಿಐಎಂ ಅಭ್ಯರ್ಥಿ ವಿಎಸ್ ಸುನೀಲ್‌ಕುಮಾರ್ ಅವರನ್ನು ಸುಮಾರು 75,000 ಮತಗಳ ಅಂತರದಿಂದ ಸೋಲಿಸುವ ಮೂಲಕ ತ್ರಿಶೂರ್‌ನಲ್ಲಿ ಗೆದ್ದಿದ್ದರು. ಇವರು ಕೇರಳ ಮೊಟ್ಟ ಮೊದಲ ಬಿಜೆಪಿ ಸಂಸದರಾಗಿದ್ದಾರೆ.
ತ್ರಿಶೂರ್: ಕೇಂದ್ರ ಸಚಿವ ಮತ್ತು ಕೇರಳದ ಬಿಜೆಪಿಯ ಮೊದಲ ಸಂಸದ ಸುರೇಶ್ ಗೋಪಿ (Suresh Gopi) ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು (Indira Gandhi) ‘ಭಾರತ ಮಾತೆ’ ಎಂದು ಕರೆದಿದ್ದಾರೆ. ಇದೇ ವೇಳೆ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ ಅವರನ್ನು ‘ಧೈರ್ಯಶಾಲಿ ಆಡಳಿತಗಾರ’ ಎಂದು ನಟ ಹಾಗೂ ರಾಜಕಾರಣಿ ಸುರೇಶ್ ಗೋಪಿ ಬಣ್ಣಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸುರೇಶ್ ಗೋಪಿ ಅವರು ಮಾಜಿ ಮುಖ್ಯಮಂತ್ರಿಗಳಾದ ಕರುಣಾಕರನ್ ಮತ್ತು ಇ.ಕೆ ನಾಯನಾರ್ ಅವರನ್ನು ತಮ್ಮ ‘ರಾಜಕೀಯ ಗುರುಗಳು’ ಎಂದು ಕರೆದಿದ್ದಾರೆ. ತಮ್ಮ ಕ್ಷೇತ್ರವಾದ ತ್ರಿಶೂರ್‌ನಲ್ಲಿರುವ ಕರುಣಾಕರನ್ ಅವರ ಸ್ಮಾರಕ ‘ಮುರಳಿ ಮಂದಿರಂ’ಗೆ ಭೇಟಿ ನೀಡಿದ ನಂತರ ಮಾತನಾಡಿದ ಬಿಜೆಪಿ ನಾಯಕ ಸುರೇಶ್ ಗೋಪಿ ಈ ಹೇಳಿಕೆ ನೀಡಿದ್ದಾರೆ.

ಇಲ್ಲಿನ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ “ಮುರಳಿ ಮಂದಿರಂ” ಗೆ ಭೇಟಿ ನೀಡಿದ ನಂತರ ಶ್ರೀ ಗೋಪಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಮ್ಮ ಹೇಳಿಕೆಗೆ ಯಾವುದೇ ರಾಜಕೀಯ ಅರ್ಥವನ್ನು ಸೇರಿಸಬೇಡಿ ಎಂದು ಸುದ್ದಿಗಾರರನ್ನು ಒತ್ತಾಯಿಸಿದ ಅವರು ನಾನು ನನ್ನ ‘ಗುರು’ಗಳಿಗೆ ಗೌರವ ಸಲ್ಲಿಸಲು ಸ್ಮಾರಕಕ್ಕೆ ಬಂದಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಭಾರತ ಮಾತೆ, ಮಾರ್ಕ್ಸ್‌ವಾದಿ ಹಿರಿಯ ನಾಯಕರನ್ನು ತನ್ನ ರಾಜಕೀಯ ಗುರು ಎಂದು ಕರೆದಿರುವ ಸುರೇಶ್ ಗೋಪಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದಿರಾ ಗಾಂಧಿ ಹೇಗೆ “ಭಾರತದ ಮಾತೆ”ಯೋ ಹಾಗೇ ಕರುಣಾಕರನ್ “ಕೇರಳ ರಾಜ್ಯದ ಕಾಂಗ್ರೆಸ್ ಪಕ್ಷದ ಪಿತಾಮಹ” ಎಂದು ಹೇಳಿದ್ದಾರೆ.

ಸುರೇಶ್ ಗೋಪಿ ಅವರು ಈ ಬಾರಿ ತ್ರಿಶೂರ್ ಲೋಕಸಭಾ ಕ್ಷೇತ್ರವನ್ನು ಗೆದ್ದು ಕೇರಳದಲ್ಲಿ ಬಿಜೆಪಿಯ ಖಾತೆ ತೆರೆದಿದ್ದಾರೆ. ತ್ರಿಶೂರ್ ಲೋಕಸಭಾ ಚುನಾವಣೆಗೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಐ ಪ್ರಮುಖ ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡಿದ್ದರು.
