
ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಆದರೆ ಅವರು ಎಲ್ಲರ ನಿರೀಕ್ಷೆಯನ್ನು ತಲೆ ಕೆಳಗಾಗಿಸಿ ಪ್ರಚಾರದಲ್ಲಿ ಮಾತ್ರ ತೊಡಗಿಸಿಕೊಂಡಿದ್ದರು.
ಇತ್ತ ಕೇರಳದ ವಯನಾಡು ಮತ್ತು ರಾಯ್ ಬರೇಲಿಯಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಕಡೆ ಜಯ ಗಳಿಸಿದ್ದಾರೆ. ಇದೀಗ ಅವರು ಒಂದು ಕಡೆ ತಮ್ಮ ಸ್ಥಾನವನ್ನು ಬಿಟ್ಟು ಕೊಡಬೇಕಿದೆ. ಮೂಲಗಳ ಪ್ರಕಾರ ಅವರು ವಯನಾಡು ಕ್ಷೇತ್ರವನ್ನು ತೊರೆಯಲಿದ್ದು, ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿರುವ ರಾಯ್ ಬರೇಲಿ ಮತ್ತು ವಯನಾಡು ಎರಡೂ ಕಡೆ ರಾಹುಲ್ ಗಾಂಧಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದಾರೆ. 2019ರಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿದ್ದ ಅವರು ಅಮೇಥಿಯಲ್ಲಿ ಬಿಜೆಪಿಯ ಸ್ಲೃತಿ ಇರಾನಿ ವಿರುದ್ಧ ಸೋತಿದ್ದರು.

ವಯನಾಡಿನಲ್ಲಿ ಸತತ ಎರಡನೇ ಬಾರಿ ಜಯ ಗಳಿಸಿದ ಅವರು ಇದೀಗ ಅನಿವಾರ್ಯವಾಗಿ ಅಲ್ಲಿನ ಸ್ಥಾನವನ್ನು ತ್ಯಜಿಸಬೇಕಾಗಿದೆ. ಹೀಗಾಗಿ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
