
ಬೆಂಗಳೂರು: ನಟ ದರ್ಶನ್ ಆಪ್ತಗೆಳತಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನ ಕೊಲೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ತೂ ಹಾಗೂ ಸಹಚರರ ಬಂಧನವಾಗಿದೆ.

ಯಾರು ಈ ರೇಣುಕಾ ಸ್ವಾಮಿ? ಈತನ ಹಿನ್ನೆಲೆ ಏನು? ಈತನ ಕೊಲೆ ಆಗಿದ್ದೇಕೆ? ದರ್ಶನ್ ಗೇಕೆ ಈತನ ಮೇಲೆ ಸಿಟ್ಟು? ಇಲ್ಲಿದೆ ಮಾಹಿತಿ.
ರೇಣುಕಾಸ್ವಾಮಿ ಚಿತ್ರದುರ್ಗದ ನಿವಾಸಿ, ನಗರದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯಲ್ಲಿ ವಾಸವಿದ್ದ. ಅಪೋಲೊ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಮೃತ ರೇಣುಕಾ ಸ್ವಾಮಿ, ಬೆಸ್ಕಾಂ ನಿವೃತ್ತ ನೌಕರ ಶಿವನಗೌಡ-ರತ್ನಪ್ರಭಾ ದಂಪತಿ ಪುತ್ರ. ಈತ ದರ್ಶನ್ ಅಭಿಮಾನಿ ಆಗಿದ್ದ.
ರೇಣುಕಾಸ್ವಾಮಿಗೆ ಕಳೆದ ವರ್ಷವಷ್ಟೆ ಮದುವೆಯಾಗಿತ್ತು. ರೇಣುಕಾಸ್ವಾಮಿ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ರೇಣುಕಾ ಸ್ವಾಮಿ ಭಜರಂಗದಳದಲ್ಲಿಯೂ ಗುರುತಿಸಿಕೊಂಡಿದ್ದ. 3ವರ್ಷದ ಹಿಂದೆ ಭಜರಂಗದಳ ಸುರಕ್ಷಾ ಪ್ರಮುಖ ಆಗಿ ಗುರುತಿಸಿಕೊಂಡಿದ್ದ.

ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ, ವಿಜಯಲಕ್ಷ್ಮಿ ಹಾಗೂ ದರ್ಶನ್ ದಾಂಪತ್ಯದ ಮಧ್ಯೆ ಬಂದಿರುವ ಪವಿತ್ರಾ ಬಗ್ಗೆ ಆಕ್ರೋಶ ಹೊಂದಿದ್ದ. ಹಾಗಾಗಿ ಪವಿತ್ರಾಗೆ ಅಶ್ಲೀಲ ಸಂದೇಶಗಳ ಕಳಿಸಿದ್ದ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆ
ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೇಸೆಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿ (33) ಎಂಬವರನ್ನು ಹತ್ಯೆ ಮಾಡಲಾಗಿತ್ತು. ಪ್ರಾಥಮಿಕ ತನಿಖೆಗಳಲ್ಲಿ ಈ ವಿಚಾರ ತಿಳಿದುಬಂದಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.
ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದು. ದರ್ಶನ್ ಆಪ್ತೆ ಪವಿತ್ರಾ ಗೌಡರಿಂದಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಕಾರಣಕ್ಕೆ ಪವಿತ್ರಾ ಮೇಲಿನ ಸಿಟ್ಟಿನಿಂದ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ.

ಇದರಿಂದಾಗಿ ದರ್ಶನ್, ರೇಣುಕಾ ಸ್ವಾಮಿ ಮೇಲೆ ಸಿಟ್ಟುಕೊಂಡು ಬುದ್ಧಿಕಲಿಸಲು ನಿಶ್ಚಯಿಸಿದ್ದರು. ನಂತರ ಅಭಿಮಾನಿ ಬಳಗದ ನೆರವಿನಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ನಂತರ ಶವವನ್ನು ಮೋರಿಗೆ ಎಸೆಯಲಾಗಿತ್ತು.