
ವಿರೋಧ ಪಕ್ಷದ ಇಂಡಿಯಾ ಬಣ ಇಂದು ಸರ್ಕಾರ ರಚಿಸಲು ಹಕ್ಕು ಮಂಡಿಸದಿದ್ದರೆ ನಾಳೆ ಅದನ್ನು ಮಾಡುವುದಿಲ್ಲ ಎಂದು ಅರ್ಥವಲ್ಲ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಂದು ಇಂಡಿಯಾ ಬಣವು ಸರ್ಕಾರ ರಚಿಸಲು ಹಕ್ಕು ಮಂಡಿಸದಿದ್ದರೆ, ನಾಳೆ ಅದನ್ನು ಮಾಡುವುದಿಲ್ಲ ಎಂದು ಅರ್ಥವಲ್ಲ. ನಾವು ಕಾಯುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ, ಅವಕಾಶಕ್ಕಾಗಿ ಕಾಯೋಣ. ದೇಶಕ್ಕೆ ಬದಲಾವಣೆ ಬೇಕು. ಯಾರಿಗೂ ನರೇಂದ್ರ ಮೋದಿ ಬೇಡ. ಈ ಭಾರಿ ಸೋಲಿನ ನಂತರ ಮೋದಿ ಅವರು ಬೇರೆಯವರಿಗೆ ಜವಾಬ್ದಾರಿ ನೀಡಬೇಕಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಹೊಸದಾಗಿ ಚುನಾಯಿತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರೊಂದಿಗೆ ಸಭೆ ನಡೆಸಿದ ನಂತರ ಮಮತಾ ಬ್ಯಾನರ್ಜಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಭೆಯಲ್ಲಿ ಪಕ್ಷದ ರಾಜ್ಯಸಭಾ ಸದಸ್ಯರು, ಜಿಲ್ಲಾಧ್ಯಕ್ಷರು ಮತ್ತು ಇತರ ಕೆಲವು ಮುಖಂಡರು ಭಾಗವಹಿಸಿದ್ದರು.
ಅಂತಿಮವಾಗಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುತ್ತದೆ. ಈಗಿನ ಸರ್ಕಾರ ಮೊದಲು ತಮ್ಮ ಸಮತೋಲನವನ್ನು ಕಾಯ್ದುಕೊಳ್ಳಲಿ ಮತ್ತು ಅವರು ತಮ್ಮ ಮೈತ್ರಿ ಪಕ್ಷಗಳನ್ನು ಎಷ್ಟರ ಮಟ್ಟಿಗೆ ತೃಪ್ತಿಪಡಿಸುತ್ತಾರೆ ಎಂದು ನಾವು ಕಾದು ನೋಡುತ್ತೇವೆ. ದೇಶಕ್ಕಾಗಿ ಏನನ್ನೂ ನೀಡದ ಪ್ರಸ್ತುತ ಅಸ್ಥಿರ ಮತ್ತು ದುರ್ಬಲ ಸರ್ಕಾರವನ್ನು ಆದಷ್ಟು ಬೇಗ ಹೊರಹಾಕಿದರೆ ನಾವು ಸಂತೋಷಪಡುತ್ತೇವೆ. ಅವರು ಮನೆಗೆ ಹೋಗಬೇಕು, ಕೆಲವು ದಾನ, ಧ್ಯಾನ ಮಾಡಬೇಕು. ಇಂಡಿಯಾ ಮೈತ್ರಿಕೂಟಕ್ಕೆ ಬದ್ಧತೆಗಳನ್ನು ಪೂರೈಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ಟಿಎಂಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಹೊರಗುಳಿಯುವ ಸಾಧ್ಯತೆ ಇದೆ. ತಮ್ಮ ಪಕ್ಷದ ಸಂಸದರು ಪ್ರಮಾಣ ವಚನ ಸ್ವೀಕರಿಸಿದ ನಂತರ ಒಂದು ದಿನ ದೆಹಲಿಗೆ ಭೇಟಿ ನೀಡುತ್ತೇನೆ. ನನ್ನನ್ನು ಕ್ಷಮಿಸಿ, ನಾನು ಪ್ರಜಾಸತ್ತಾತ್ಮಕವಲ್ಲದ, ಅಸಾಂವಿಧಾನಿಕ ಮತ್ತು ಕಾನೂನುಬಾಹಿರವಾಗಿ ರಚನೆಯಾಗುತ್ತಿರುವ ಸರ್ಕಾರಕ್ಕೆ ನನ್ನ ಶುಭಾಶಯಗಳನ್ನು ತಿಳಿಸುವುದಿಲ್ಲ. ಬಿಜೆಪಿ ಪರವಾಗಿ ಮತ ಚಲಾಯಿಸದ ದೇಶದ ಜನರಿಗೆ ನನ್ನ ಶುಭ ಹಾರೈಕೆಗಳು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಿಜೆಪಿ ತನ್ನ ಬಹುಮತವನ್ನು ಕಳೆದುಕೊಂಡಿರುವುದರಿಂದ, ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಬಹುದು. ನಾನು ಎಲ್ಲಾ ಪಕ್ಷಗಳ ಸಂಸದರನ್ನು ತಮ್ಮ ಪಕ್ಷಗಳನ್ನು ಬಲಪಡಿಸಲು ವಿನಂತಿಸುತ್ತೇನೆ ಏಕೆಂದರೆ ಅವರು ಮತ್ತೆ ಅವುಗಳನ್ನು ಒಡೆಯಲು ಪ್ರಯತ್ನಿಸುತ್ತಾರೆ. ಅದು ಒಳ್ಳೆಯದಲ್ಲ ಎಂಬುದನ್ನು ಬಿಜೆಪಿಯವರು ಅರಿಯಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
