
ಮೈಸೂರು: ಸಾಮೂಹಿಕವಾಗಿ ಗ್ಯಾರಂಟಿ ಯೋಜನೆ (Guarantee Scheme) ಕೊಡುವುದನ್ನು ನಿಲ್ಲಿಸೋದೆ ಒಳಿತು. ಜನರಿಗೆ ಕಾಂಗ್ರೆಸ್ (Congress) ಗ್ಯಾರಂಟಿ ಇಷ್ಟ ಆಗಿಲ್ಲ. ಅದನ್ನು ಅವರು ಫಲಿತಾಂಶದ ಮೂಲಕ ತೋರಿಸಿದ್ದಾರೆ ಎಂದು ಮೈಸೂರು-ಕೊಡಗು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ (M Lakshman) ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಮ್ಮ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿತ್ತು. ಜನ ಅವರನ್ನು ಬೆಂಬಲಿಸಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಅಂತಲೇ ಅಲ್ವಾ? ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ಈಗ ಮರು ಪರಿಶೀಲನೆ ಮಾಡಬೇಕು. ಈ ಬಗ್ಗೆ ಸಿಎಂ ಗಮನಹರಿಸಬೇಕು. 70% ರಷ್ಟು ಮೇಲ್ವರ್ಗದವರು ಈ ಯೋಜನೆ ಫಲಾನುಭವಿಗಳಾಗಿದ್ದಾರೆ. ಆದರೆ ಅದನ್ನು ಜನರು ತಿರಸ್ಕಾರ ಮಾಡಿದ್ದಾರೆ ಎಂದರು.

ಬೆಂಜ್ ಕಾರ್ ಹೊಂದಿರುವವನು, 25,000 ಸಂಬಳ ಪಡೆಯುವ ವ್ಯಕ್ತಿಗೆ ಪುಕ್ಕಟೆ ಕರೆಂಟ್ ಕೊಟ್ಟರೆ ಹೇಗೆ? ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನ ಇದ್ದಾರೆ. ಅಂತಹವರನ್ನು ನೋಡಿ ಗ್ಯಾರಂಟಿ ರೀ ಲುಕ್ ಮಾಡುವ ಅಗತ್ಯ ಇದೆ. ಇದಕ್ಕೆ ಉದಾಹರಣೆ ಎಂದರೆ ಹುಣಸೂರಿನ ಹಲವು ಹಳ್ಳಿಗಳಲ್ಲಿ ಕೇವಲ ಒಂದೇ ಸಮುದಾಯದವರು ಇದ್ದಾರೆ. ಅಲ್ಲಿ ಬಿಜೆಪಿಗೆ 600ಕ್ಕೂ ಹೆಚ್ಚು ಮತ ನೀಡಿದ್ರೆ ನನಗೆ ಕೇವಲ ಮೂರು, ಏಳು ಮತಗಳನ್ನ ನೀಡಿದ್ದಾರೆ. ಒಕ್ಕಲಿಗರು ನನಗೆ ಮತ ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
