
Karnataka Legislative Council Elections 2024: ಲೋಕಸಭಾ ಚುನಾವಣಾ ಬೆನ್ನಲ್ಲೆ ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಇದೇ ಜೂನ್ 13ರಂದು ನಡೆಯಲಿರುವ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಲಾಬಿ ತೀವ್ರವಾಗಿದ್ದು, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಏಳು ಜನರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಹಾಗಾದ್ರೆ, ಆ ಮೇಲ್ಮನೆಗೆ ಹೋಗುವ ಆ ಏಳು ಜನರು ಯಾರು-ಯಾರು? ಇಲ್ಲಿದೆ ವಿವರ

ಬೆಂಗಳೂರು, (ಜೂನ್ 02): ಲೋಕಸಭಾ ಚುನಾವಣಾ (Loksabha Elections 2024) ಬೆನ್ನಲ್ಲೆ ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ (Karnataka Legislative Council Elections 2024) ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಸಂಖ್ಯಾಬಲದ ಮೇಲೆ ಒಟ್ಟು 11ರಲ್ಲಿ ಏಳು ಸ್ಥಾನಗಳು ಕಾಂಗ್ರೆಸ್ಗೆ ಸಿಗಲಿದ್ದು, ಆ ಸ್ಥಾನಗಳಿಗೆ ಇದೀಗ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಸುಮಾರು ಆಕಾಂಕ್ಷಿಗಳಲ್ಲಿ ಕೊನೆಗೂ ಹೈಕಮಾಂಡ್ ಅಳೆದು ತೂಗಿ 7 ಜನರಿಗೆ ಮಣೆ ಹಾಕಿದೆ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಹಾಲಿ ಸಚಿವ ಎನ್.ಎಸ್.ಬೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ವಸಂತಕುಮಾರ್, ಜಗದೇವ್ ಗುತ್ತೇದಾರ್, ಐವನ್ ಡಿಸೋಜಾ ಮತ್ತು ಬಿಲ್ಕಿಸ್ ಬಾನೊ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಇನ್ನು ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅವರನ್ನ ಆಯ್ಕೆ ಮಾಡಿದೆ.

ಸಮುದಾಯಗಳ ಆಧಾರದಲ್ಲಿ ಅಭ್ಯರ್ಥಿ ಆಯ್ಕೆ
ಮೂಲಗಳ ಪ್ರಕಾರ ಸಮುದಾಯಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಒಕ್ಕಲಿಗ ಸಮುದಾಯದಿಂದ ಈಗಿರುವ ಗೋವಿಂದರಾಜ್ ಅವರನ್ನೇ ಮತ್ತೊಂದು ಅವಧಿಗೆ ಮುಂದುವರಿಸಿದೆ. ಒಬಿಸಿ ಸಮುದಾಯದಿಂದ ಯತೀಂದ್ರ ಸಿದ್ದರಾಮಯ್ಯ, ಪರಿಶಿಷ್ಟ ಜಾತಿ ಸಮುದಾಯದಿಂದ ವಸಂತಕುಮಾರ್, ರೆಡ್ಡಿ ಸಮುದಾಯದಿಂದ ಹಾಲಿ ಸಚಿವ ಎನ್ಎಸ್ ಬೋಸರಾಜು, ಜಗದೇವ್ ಗುತ್ತೇದಾರ್ ಅವರಿಗೆ ಮಣೆ ಹಾಕಿದೆ.

ಬೈ ಎಲೆಕ್ಷನ್ಗೂ ಅಭ್ಯರ್ಥಿ ಘೋಷಣೆ
ಇನ್ನು ಈ ಏಳು ಪರಿಷತ್ ಸ್ಥಾನಗಳಿಗೆ ಮಾತ್ರವಲ್ಲದೇ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ, ಮುಂಬರುವ ಬೈ ಎಲೆಕ್ಷನ್ಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರನ್ನು ಆಯ್ಕೆ ಮಾಡಿದೆ.

