
ನವದೆಹಲಿ: ಕಳೆದ 2 ತಿಂಗಳಿಂದ ಇಡೀ ದೇಶಾದ್ಯಂತ ನಡೆಯುತ್ತಿದ್ದ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ಬಂದಿದೆ. ಇಂದು ಅತಿ ದೊಡ್ಡ ಚುನಾವಣಾ ಹಬ್ಬದ 7ನೇ ಹಂತದ ಮತದಾನ ಮುಕ್ತಾಯವಾಗುತ್ತಿದೆ. ಜೂನ್ 04ರಂದು 18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ.

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಮತದಾನೋತ್ತರ ಸಮೀಕ್ಷೆಗಳ ಲೆಕ್ಕಾಚಾರಗಳು ನಡೆಯುತ್ತಿದ್ದು, ಇಂದು ರಾತ್ರಿ ಬಹು ನಿರೀಕ್ಷಿತ ಎಕ್ಸಿಟ್ ಪೋಲ್ ಭವಿಷ್ಯ ಹೊರಬೀಳುತ್ತಿದೆ. ಇಂದು ಸಂಜೆ 6 ಗಂಟೆಗೆ ಲೋಕಸಭಾ ಚುನಾವಣೆಯ ಮತದಾನ ಅಂತ್ಯವಾಗಲಿದೆ. ಇದಾದ ಬಳಿಕ ಅಂದ್ರೆ 6.30ರಿಂದ ಚುನಾವಣಾ ಪೂರ್ವ ಫಲಿತಾಂಶ ಹೊರ ಬೀಳುತ್ತಿದೆ

ಸದ್ಯ ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ರಿಸಲ್ಟ್ ಇಡೀ ದೇಶದ ಗಮನ ಸೆಳೆದಿದೆ. ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗ ಎಕ್ಸಿಟ್ ಪೋಲ್ ಎಷ್ಟು ಸರಿ ಅನ್ನೋದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಇಂದಿನ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ನಾಯಕರು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಎಕ್ಸಿಟ್ ಪೋಲ್ ಪಕ್ಕಾ ರಿಸಲ್ಟ್ ಅಲ್ಲ. ಹೀಗಾಗಿ ಎಕ್ಸಿಟ್ ಪೋಲ್ ಚರ್ಚೆಯಿಂದ ದೂರ ಉಳಿಯಲು ನಿರ್ಧಾರ ಮಾಡಿದೆ.

ExitPoll ಲೆಕ್ಕಾಚಾರ Exact ಅಲ್ಲ!!??
ಎಕ್ಸಿಟ್ ಪೋಲ್.. ಎಕ್ಸಿಟ್ ಪೋಲ್ ಅನ್ನೋ ನಿರೀಕ್ಷೆಯ ಮಧ್ಯೆ ಚುನಾವಣೆಯ ಭವಿಷ್ಯ ನಿಜವಾಗುತ್ತಾ ಎನ್ನುವ ಪ್ರಶ್ನೆಯು ಕೇಳಿ ಬಂದಿದೆ. ಎಕ್ಸಿಟ್ ಪೋಲ್‌ನ ಇತಿಹಾಸವನ್ನು ನೋಡಿದ್ರೆ 6 ಬಾರಿ ಎಕ್ಸಿಟ್ ಪೋಲ್‌ನ ಫಲಿತಾಂಶಗಳು ಉಲ್ಟಾ ಆಗಿವೆ. ಎಕ್ಸಿಟ್ ಪೋಲ್ ಭವಿಷ್ಯ ತಲೆಕೆಳಗಾದ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಅಟಲ್ ಸರ್ಕಾರದ ಭವಿಷ್ಯ!
2004ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ NDA ನಾಯಕರು ಲೋಕಸಭಾ ಚುನಾವಣೆಯನ್ನು ಎದುರಿಸಿದ್ದರು. ಆಗ ಇಂಡಿಯಾ ಶೈನಿಂಗ್ ಅನ್ನೋ ಸ್ಲೋಗನ್‌ನಲ್ಲಿ ಚುನಾವಣೆ ಎದುರಿಸಿದ NDAಗೆ ಎಕ್ಸಿಟ್ ಪೋಲ್‌ನಲ್ಲಿ 240-275 ಕ್ಷೇತ್ರವನ್ನು ಗೆಲ್ಲಬಹುದು ಎಂದು ಹೇಳಲಾಗಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ NDA ಕೇವಲ 187 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್ ನೇತೃತ್ವದ UPA ಮಿತ್ರಕೂಟ ಅಧಿಕಾರಕ್ಕೆ ಬಂದು ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆದರು.

2014ರ ಚುನಾವಣಾ ಲೆಕ್ಕಾಚಾರ
2014ರಲ್ಲೂ ಹಲವು ಮತದಾನೋತ್ತರ ಚುನಾವಣಾ ಭವಿಷ್ಯದ ಲೆಕ್ಕಾಚಾರ ತಪ್ಪಾಗಿತ್ತು. ಲೋಕಸಭಾ ಚುನಾವಣೆ ಮುಗಿದ ಮೇಲೆ ಬಿಜೆಪಿ ನೇತೃತ್ವದ NDA ಅಧಿಕಾರಕ್ಕೆ ಬರುತ್ತೆ. ಆದರೆ ಹಲವು ಎಕ್ಸಿಟ್ ಪೋಲ್‌ಗಳಲ್ಲಿ NDA 261ರಿಂದ 289 ಸ್ಥಾನಗಳನ್ನು ಗೆಲ್ಲಲಿದೆ ಎಂದಿತ್ತು. ಆದರೆ ಮತದಾರರ ತೀರ್ಪು ಹೊರ ಬಂದಾಗ NDA 336 ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿ ಪಕ್ಷವೇ ಬಹುಮತದ ದಾಖಲೆ ಬರೆದಿತ್ತು. ಪ್ರತಿಪಕ್ಷ ಕಾಂಗ್ರೆಸ್ ಕೇವಲ 44 ಕ್ಷೇತ್ರಗಳಿಗೆ ಕುಸಿದಿತ್ತು.

ಉತ್ತರ ಪ್ರದೇಶ ಚುನಾವಣೆ
2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಭವಿಷ್ಯ ಅತಂತ್ರ ರಿಸಲ್ಟ್ ಬರಲಿದೆ ಎನ್ನಲಾಗಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 325 ಕ್ಷೇತ್ರಗಳಲ್ಲಿ ಗೆದ್ದು ದಿಗ್ವಿಜಯ ದಾಖಲಿಸಿತ್ತು.

ಬಿಹಾರ ಚುನಾವಣೆ
2015ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಎಕ್ಸಿಟ್ ಪೋಲ್ ಭವಿಷ್ಯ ಉಲ್ಟಾ ಆಗಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಈ ಬಾರಿ ಬಿಹಾರದಲ್ಲಿ ಯಾರಿಗೂ ಬಹುಮತ ಬರೋದಿಲ್ಲ ಎನ್ನಲಾಗಿತ್ತು. ಆದರೆ ಫಲಿತಾಂಶದಲ್ಲಿ RJD-JDU-ಕಾಂಗ್ರೆಸ್ ಮಿತ್ರಕೂಟ ಸುಲಭವಾಗಿ ಬಹುಮತ ಸಾಧಿಸಿತ್ತು. RJD ಅತಿಹೆಚ್ಚು ಕ್ಷೇತ್ರಗಳನ್ನು ಗೆದ್ದ ಮೊದಲ ಪಕ್ಷವಾಗಿ ಹೊರ ಹೊಮ್ಮಿತ್ತು.

ದೆಹಲಿಯ ಫಲಿತಾಂಶ
2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಲೆಕ್ಕಾಚಾರದಲ್ಲಿ ಎಎಪಿ ಪಕ್ಷಕ್ಕೆ ಬಹುಮತ ಸಿಗಲಿದೆ ಎನ್ನಲಾಗಿತ್ತು. 70 ವಿಧಾನಸಭಾ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚಿನ ಆಮ್ ಆದ್ಮಿ ಪಕ್ಷ 50ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಬಹುದು ಎಂದಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ 70 ರಲ್ಲಿ AAP 67 ಕ್ಷೇತ್ರಗಳಲ್ಲಿ ಗೆದ್ದು ಎಲ್ಲರಿಗೂ ಶಾಕ್ ಕೊಟ್ಟಿತ್ತು. ಆಪ್ ಪಕ್ಷದ ಈ ವಿಕ್ಟರಿಯನ್ನ ಯಾವ ಮತದಾನೋತ್ತರ ಸಮೀಕ್ಷೆಯೂ ನಿರೀಕ್ಷೆ ಮಾಡಿರಲಿಲ್ಲ.
ಛತ್ತೀಸ್‌ಗಢ ಚುನಾವಣೆ
2023ರ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲೂ ಎಕ್ಸಿಟ್ ಪೋಲ್ ಭವಿಷ್ಯ ನಿರಾಸೆ ತಂದಿತ್ತು. ಮತದಾನೋತ್ತರ ಸಮೀಕ್ಷೆಯಲ್ಲಿ ಛತ್ತೀಸ್‌ಗಢವನ್ನು ಕಾಂಗ್ರೆಸ್ ಗೆಲ್ಲಬಹುದು ಎನ್ನಲಾಗಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಗೆದ್ದು ಬೀಗಿತು