
2024ರ ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳ ಮತದಾನದ ಪ್ರತಿ ರಾತ್ರಿ ಚುನಾವಣಾ ಆಯೋಗ ನೀಡಿದ ಮತದಾನದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 1.07 ಕೋಟಿ ಮತಗಳ ವ್ಯತ್ಯಾಸವನ್ನು ತೋರಿಸುತ್ತವೆ. ಅಂದರೆ ಮತದಾನ ಮುಗಿದ 379 ಕ್ಷೇತ್ರಗಳಲ್ಲಿ ಸರಾಸರಿ 28,000 ಮತಗಳ ವ್ಯತ್ಯಾಸವನ್ನು ತೋರಿಸುತ್ತದೆ.

ಪ್ರತಿ ಹಂತದ ಮತದಾನ ದಿನದಂದು ರಾತ್ರಿ 10.30ರಿಂದ 11.30ರ ನಡುವೆ ಅಂಕಿಅಂಶಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ. ಚು.ಆಯೋಗ ಬಿಡುಗಡೆಗೊಳಿಸಿರುವ ಅಂತಿಮ ಅಂಕಿ ಅಂಶಗಳು ಪೋಸ್ಟಲ್ ಮತಗಳನ್ನು ಒಳಗೊಂಡಿಲ್ಲ ಹಾಗೂ ಇದು ಅಂದಾಜು ಟ್ರೆಂಡ್‌ಗಳು ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಮೊದಲ ಹಂತದ ಮತದಾನ ನಡೆದ 11 ದಿನಗಳ ನಂತರ ಮತದಾನದ ಬಗ್ಗೆ ಮಾಹಿತಿ ನೀಡಲಾಗಿದೆ ಮತ್ತ 2, 3 ಮತ್ತು 4ನೇ ಹಂತದ ಚುನಾವಣೆಯ ನಾಲ್ಕು ದಿನಗಳ ನಂತರ ಈ ಪ್ರಕ್ರಿಯೆ ನಡೆದಿದೆ.

ಅಂತಿಮ ಅಂಕಿಅಂಶಗಳು ಮತದಾನದ ದಿನದಂದು ಬಹಿರಂಗಗೊಳಿಸಿದ ಅಂಕಿಅಂಶಗಳಿಗಿಂತ ಭಿನ್ನವಾಗಿವೆ. ಹಲವಾರು ರಾಜ್ಯಗಳಲ್ಲಿನ ಅಂಕಿ-ಅಂಶಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮೊದಲ ಹಂತದ ಚುನಾವಣೆಯಲ್ಲಿ 18.6 ಲಕ್ಷ ಮತಗಳು, ಎರಡನೇ ಹಂತದಲ್ಲಿ 32.2 ಲಕ್ಷ ಮತಗಳು, ಮೂರನೇ ಹಂತದಲ್ಲಿ 22.1 ಲಕ್ಷ ಹಾಗೂ ನಾಲ್ಕನೇ ಹಂತದಲ್ಲಿ 33.9 ಲಕ್ಷ ಮತಗಳು ಹೀಗೆ ಒಟ್ಟು 1.07 ಕೋಟಿ ಮತಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಆಂಧ್ರ ಪ್ರದೇಶದಲ್ಲಿ ಆರಂಭದಲ್ಲಿ ತಿಳಿಸಲಾದ ಅಂಕಿಅಂಶ ಮತ್ತು ಅಂತಿಮ ಡೇಟಾದಲ್ಲಿ 4.2% ವ್ಯತ್ಯಾಸವಿದೆ (ಇದು ಗರಿಷ್ಠ 17.2 ಲಕ್ಷ ಆಗಿದೆ). ಮಹಾರಾಷ್ಟ್ರದಲ್ಲಿ ಶೇ 2.4(ಅಂದರೆ 16.7 ಲಕ್ಷ), ಕೇರಳದಲ್ಲಿ ಶೇ 4.1 (ಅಂದರೆ 11.4 ಲಕ್ಷ) ಮತ್ತು ಅಸ್ಸಾಂನಲ್ಲಿ ಶೇ 4.2 (ಅಂದರೆ 10.3 ಲಕ್ಷ) ಮತಗಳಲ್ಲಿ ಏರಿಕೆಯಾಗಿದೆ. ಅಸ್ಸಾಂನಲ್ಲಿ ಪ್ರತಿ ಕ್ಷೇತ್ರದಲ್ಲಿ 73,000ಕ್ಕೂ ಅಧಿಕ ಮತಗಳ ವ್ಯತ್ಯಾಸವಿದೆ. ಆಂಧ್ರಪ್ರದೇಶದಲ್ಲಿ 69,000 ಮತಗಳು ಹಾಗೂ ಕೇರಳದಲ್ಲಿ 57,000 ಮತಗಳು, ಕರ್ನಾಟಕದಲ್ಲಿ 51,000 ಮತ್ತು ಮಹಾರಾಷ್ಟ್ರದಲ್ಲಿ 48,000 ಮತಗಳ ವ್ಯತ್ಯಾಸವಿದೆ.

ಆದರೆ ಹಿಂದಿ ಭಾಷೆಯ ರಾಜ್ಯಗಳಲ್ಲಿ ಚುನಾವಣಾ ಆಯೋಗದ ಅಂಕಿಸಂಖ್ಯೆಗಳಲ್ಲಿ ಹೆಚ್ಚಾಗಿ ವ್ಯತ್ಯಾಸ ಕಂಡು ಬಂದಿಲ್ಲ. ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ಚುನಾವಣಾ ಆಯೋಗವು ಸುಮಾರು 67% ಮತದಾನವನ್ನು ದಾಖಲಿಸಿದೆ.