
ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 ಪೆನ್ಡ್ರೈವ್ಗಳು, ಹಾರ್ಡ್ ಡಿಸ್ಕ್ ಪತ್ತೆಯಾಗಿವೆ. ಮತ್ತೊಂದೆಡೆ, ವಿಡಿಯೋ ಸೋರಿಕೆ ಪ್ರಕರಣದ 6 ಮತ್ತು 7 ನೇ ಆರೋಪಿಗಳನ್ನು ಬಂಧಿಸಲಾಗಿದ್ದು,.
ಹಾಸನ, ಮೇ 16: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ವಿಶೇಷ ತನಿಖಾ ತಂಡಕ್ಕೆ (SIT) ಬಿಜೆಪಿ ನಾಯಕ ಪ್ರೀತಂ ಗೌಡ (Preetham Gowda) ಆಪ್ತರ ಮನೆಯಲ್ಲಿ 10 ಪೆನ್ಡ್ರೈವ್ಗಳು, ಹಾರ್ಡ್ ಡಿಸ್ಕ್ ಪತ್ತೆಯಾಗಿವೆ. ಪ್ರೀತಂ ಗೌಡ ಆಪ್ತರು ಮತ್ತು ಪ್ರಕರಣದ ಸಂಬಂಧ ಈಗಾಗಲೇ ಬಂಧಕ್ಕೊಳಗಾಗಿರುವವರ ಮನೆಗಳ ಮೇಲೆ ಎಸ್ಐಟಿ ದಾಳಿ ನಡೆಸಿತ್ತು. ಈಗ ವಶಕ್ಕೆ ಪಡೆದಿರುವ ಪೆನ್ಡ್ರೈವ್ಗಳನ್ನು ಎಸ್ಐಟಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಿದೆ.

ಪ್ರೀತಂಗೌಡ ಆಪ್ತರ ಮನೆಯಲ್ಲಿ ದೊರೆತ ಪೆನ್ಡ್ರೈವ್ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದ್ದೇ ಹೌದೋ ಅಲ್ಲವೋ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ತಿಳಿದುಬರಲಿದೆ.
ಇನ್ನು ಹಾಸನದ 18 ಕಡೆ ನಡೆಸಿದ ದಾಳಿಯಲ್ಲಿ ಎಸ್ಐಟಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. 7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್, ನಾಲ್ಕು ಲ್ಯಾಪ್ ಟಾಪ್, ಮೂರು ಡೆಸ್ಕ್ ಟಾಪ್ ವಶಕ್ಕೆ ಪಡೆದಿದೆ. ದಾಳಿ ನಡೆಸಿದ ಕಡೆಯಲ್ಲಿ ಸಿಕ್ಕ ಸಿಸಿ ಕ್ಯಾಮರಾಗಳ ದೃಶ್ಯಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಪತ್ತೆಯಾದ ಹಾರ್ಡ್ಡ ಡಿಸ್ಕ್ಗಳಲ್ಲಿರುವ ವಿಡಿಯೋಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ವಿಡಿಯೋಗಳನ್ನು ಪೆನ್ ಡ್ರೈವ್, ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ಗೆ ಕಾಪಿ ಮಾಡಿ ನಂತರ ಬೇರೆಯವರಿಗೆ ಹಂಚಿರುವ ಆರೋಪವಿದೆ.

ವಿಡಿಯೋ ಉಳ್ಳ ಪೆಬ್ಡ್ರೈವ್ ಹಂಚಿಕೆಯ ಆರೋಪ ಎದುರಿಸುತ್ತಿರುವವರ ಮನೆ, ಕಚೇರಿಗೆ ಬಂದು ಹೋಗಿರುವವರ ಬಗ್ಗೆಯೂ ಎಸ್ಐಟಿ ಮಾಹಿತಿ ಕಲೆ ಹಾಕುತ್ತಿದೆ.
ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾದ 33/2024 ಪ್ರಕರಣಕ್ಕೆ ಹೊಸ ಹೆಸರು ಸೇರಿಸಿ ಇಬ್ಬರನ್ನು ಬಂಧಿಸಲಾಗಿದೆ. 6 ಮತ್ತು 7 ನೇ ಆರೋಪಿಗಳಾಗಿ ಚೇತನ್ ಹಾಗು ಲಿಖಿತ್ ಎಂಬವರನ್ನು ಬಂಧಿಸಲಾಗಿದೆ.

ಇವರಿಬ್ಬರ ಬಂಧನವಾದರೂ ಮೊದಲ ಐವರು ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಗೌಡ, ಚೇತನ್ ಹಾಗೂ ಪುಟ್ಟಿ ಆಲಿಯಾಸ್ ಪುಟ್ಟರಾಜ್ರನ್ನು ಈವರೆಗೂ ಎಸ್ಐಟಿ ಬಂಧಿಸಿಲ್ಲ. ಪೆನ್ ಡ್ರೈವ್ ಹೊಂದಿದ್ದ ಮೂಲ ವ್ಯಕ್ತಿ, ಪ್ರಜ್ವಲ್ ಮಾಜಿ ಕಾರು ಚಾಲಕನನ್ನೂ ತನಿಖಾ ತಂಡ ವಶಕ್ಕೆ ಪಡೆದಿಲ್ಲ.