
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ 3.02 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಪ್ರಧಾನಿ ಮೋದಿಗೆ ಸ್ವಂತ ಮನೆ, ಜಮೀನು, ಕಾರು ಇಲ್ಲ. ಸದ್ಯ ಕೈಯಲ್ಲಿ 52,920 ರೂಪಾಯಿ. ನಗದು ಹೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟು 3.02 ಕೋಟಿ ಮೌಲ್ಯದ ಚರಾಸ್ತಿಯನ್ನು ಘೋಷಣೆ ಮಾಡಿದ್ದಾರೆ.

ಮೋದಿ 52,920 ರೂಪಾಯಿ ನಗದು ಹೊಂದಿದ್ದಾರೆ. ಜಮೀನು, ಮನೆ, ಕಾರು ಹೊಂದಿಲ್ಲ. ಮೋದಿ ಯಾವುದೇ ಕಂಪನಿಯಲ್ಲಿ ಷೇರು ಖರೀದಿಸಿಲ್ಲ, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿಲ್ಲ. ಪ್ರಧಾನಿ ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ.

ಗಾಂಧಿನಗರ ಎಸ್‌ಬಿಐನ ಶಾಖೆಯಲ್ಲಿ 73,304 ರೂ.ಗಳನ್ನು ಠೇವಣಿ ಇರಿಸಿದ್ದರೆ, ವಾರಣಾಸಿ ಎಸ್‌ಬಿಐನ ಶಾಖೆಯಲ್ಲಿ ಕೇವಲ 7,000 ರೂ ಠೇವಣಿ ಇರಿಸಿದ್ದಾರೆ. ಎಸ್‌ಬಿಐನಲ್ಲಿ 2 ಕೋಟಿ 85 ಲಕ್ಷ 60 ಸಾವಿರ 38 ರೂಪಾಯಿ ಮೌಲ್ಯದ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದಾರೆ. ಇನ್ನು, 2 ಲಕ್ಷ 67 ಸಾವಿರದ 750 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ನಲ್ಲಿ 9 ಲಕ್ಷ 12 ಸಾವಿರದ 398 ರೂ. ಇದೆ ಎಂದು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಶಕ್ತಿ ಪ್ರದರ್ಶಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ, ಗಂಗಾನದಿಯ ದಶಾಶ್ವಮೇಧ ಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹಡಗು ಹತ್ತುವಾಗ ಗಂಗಾದಲ್ಲಿ ಸ್ನಾನ ಮಾಡಿದರು. ಪ್ರಧಾನಿ ಮೋದಿ ಘಾಟ್‌ನಲ್ಲಿ ಗಂಗಾ ಆರತಿ ಮಾಡಿದರು. ನಂತರ 11.40ರ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಲಿದರು.
