
ಹೈದರಾಬಾದ್: ಕ್ಯೂನಲ್ಲಿ ಬರುವಂತೆ ಹೇಳಿದ್ದಕ್ಕೆ ವ್ಯಕ್ತಿಗೆ ಶಾಸಕರೊಬ್ಬರು ಕೆನ್ನೆಗೆ ಹೊಡೆದಿದ್ದಾರೆ. ತಕ್ಷಣ ವ್ಯಕ್ತಿ ಕೂಡ ಶಾಸಕನ ಕೆನ್ನೆಗೆ ಬಾರಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ತೆನಾಲಿ ಕ್ಷೇತ್ರದ ವೈಎಸ್ಆರ್ಸಿಪಿ ಪಕ್ಷದ ಶಾಸಕ ಶಿವಕುಮಾರ್ ಅವರು ತಾಲೂಕಿನ ಗ್ರಾಮವೊಂದರ ಬೂತ್ಗೆ ವೋಟ್ ಹಾಕಲೆಂದು ಬಂದು ಲೈನ್ನಲ್ಲಿ ನಿಂತಿದ್ದರು. ಈ ವೇಳೆ ಕೊಂಚ ತಡವಾಗಿದ್ದರಿಂದ ಲೈನ್ ಬಿಟ್ಟು ನೇರ ವೋಟ್ ಹಾಕಲು ರೂಮ್ ಒಳಗೆ ಹೋಗುತ್ತಿದ್ದರು. ಆಗ ಮತ ಹಾಕಲು ಬಂದಿದ್ದ ವ್ಯಕ್ತಿವೊಬ್ಬರು ಕ್ಯೂನಲ್ಲಿ ಬರುವಂತೆ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಶಾಸಕ ಶಿವಕುಮಾರ್ ವ್ಯಕ್ತಿಯ ಕೆನ್ನೆಗೆ ಹೊಡೆದಿದ್ದಾರೆ. ತಕ್ಷಣವೇ ಶಾಸಕನ ಕೆನ್ನೆಗೆ ವ್ಯಕ್ತಿ ಕೂಡ ತಿರುಗಿ ಬಾರಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಶಾಸಕನಿಗೆ ವ್ಯಕ್ತಿ ಕಪಾಳಮೋಕ್ಷ ಮಾಡುತ್ತಿದ್ದಂತೆ ಹಿಂದೆ ಇದ್ದ ಬೆಂಬಲಿಗರು ಹಲ್ಲೆ ಮಾಡಿರುವುದು ಕಂಡು ಬಂದಿದೆ. ಈ ವೇಳೆ ಕೆಲ ಸಮಯ ಬೂತ್ನಲ್ಲಿ ಜಗಳ ಸೃಷ್ಟಿಯಾಗಿತ್ತು. ಸದ್ಯ ವೈಎಸ್ಆರ್ಸಿಪಿ ಪಕ್ಷದ ಶಾಸಕ ಶಿವಕುಮಾರ್ ಮಾಡಿದ್ದು ತಪ್ಪು. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಮತ್ತೊಂದು ನ್ಯಾಯನಾ ಎಂದು ನೆಟ್ಟಿಗರು ಕಮೆಂಟ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
