
ನವದೆಹಲಿ: ದೇಶದಲ್ಲಿ ನಾಲ್ಕನೇ ಹಂತದ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಸೋಮವಾರ (ಮೇ 13) ಆರಂಭವಾಗಿದೆ. ಇಂದಿನ 4ನೇ ಹಂತದಲ್ಲಿ, 10 ರಾಜ್ಯಗಳು ಮತ್ತು ಯುಟಿಗಳಲ್ಲಿ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನ ಮುಂಜಾನೆ 7 ಗಂಟೆಗೆ ಶಾಂತಿಯುತವಾಗಿ ಆರಂಭವಾಯಿತು. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜನ ಹಕ್ಕು ಚಲಾವಣೆ ಮಾಡಲಿದ್ದು, 1,717 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13 ರಂದು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ:
ಆಂಧ್ರಪ್ರದೇಶದಲ್ಲಿ ಸೋಮವಾರ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಸತತ ಎರಡನೇ ಬಾರಿಗೆ ಸಿಎಂ ಗಾದಿಗೇರಲು ವೈ.ಎಸ್. ಜಗನ್‌ಮೋಹನ್ ರೆಡ್ಡಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಮತ್ತೆ ಅಧಿಕಾರಕ್ಕೇರಲು ಟಿಡಿಪಿಯೂ ಸಜ್ಜಾಗಿದ್ದು, ಚುನಾವಣೆ ರಣಕಣವು ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ.
