
ಕೋವಿಶೀಲ್ಡ್ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮ ಇದೆ ಎಂಬ ವಿಚಾರ ಇಡೀ ಜಗತ್ತಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಕೋವಿಶೀಲ್ಡ್ ಲಸಿಕೆ ಪಡೆದವರೆಲ್ಲ ಆತಂಕದಲ್ಲಿದ್ದಾರೆ. ಈ ಮಧ್ಯೆ ಔಷಧಿಗಳ ತಯಾರಿಕ ಕಂಪನಿ ಅಸ್ಟ್ರೆಝೆನೆಕಾ ತನ್ನ Covid-19 ವ್ಯಾಕ್ಸಿನ್ ಅನ್ನು ಜಾಗತಿಕವಾಗಿ ವಾಪಸ್ ಪಡೆದುಕೊಳ್ಳುತ್ತಿದೆ.
ತಾನು ಅಭಿವೃದ್ಧಿಪಡಿಸಿದ್ದ ಕೋವಿಶೀಲ್ಡ್ ವ್ಯಾಕ್ಸಿನ್ನಿಂದ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಉಂಟು ಮಾಡಲಿದೆ ಎಂದು ಕೋರ್ಟ್ಗೆ ದಾಖಲೆ ಸಲ್ಲಿಸಿದ ಬೆನ್ನಲ್ಲೇ, ಈ ನಿರ್ಧಾರಕ್ಕೆ ಬಂದಿದೆ. ಆದರೆ ಆರ್ಥಿಕ ಕಾರಣ ಹಿನ್ನೆಲೆಯಲ್ಲಿ ಜಾಗತಿಕವಾಗಿ ವ್ಯಾಕ್ಸಿನ್ಗಳನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ ಎಂದು ವರದಿಯಾಗಿದೆ.

ಲಸಿಕೆ ಇನ್ಮುಂದೆ ತಯಾರು ಮಾಡುವುದಿಲ್ಲ, ಜೊತೆಗೆ ಎಲ್ಲಿಯೂ ಕೂಡ ಸಪ್ಲೈ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ. ಲಸಿಕೆಯನ್ನು ವಾಪಸ್ ಪಡೆದುಕೊಳ್ಳುತ್ತಿರೋದು ಸಂಪೂರ್ಣ ಕಾಕತಾಳೀಯ. ವ್ಯಾಕ್ಸಿನ್ ಪಡೆಯುವುದರಿಂದ ಟಿಟಿಎಸ್ ಬರುತ್ತದೆ ಅನ್ನೋದನ್ನು ಅಲ್ಲಗಳೆದಿದೆ. ಅದಕ್ಕೂ, ವ್ಯಾಕ್ಸಿನ್ ಪಡೆಯುತ್ತಿರೋದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಫಾರ್ಮಾ ಕಂಪನಿ ಹೇಳಿದೆ ಎಂದು ವರದಿಯಾಗಿದೆ.

ಅಸ್ಟ್ರಾಜೆನೆಕಾ ಸ್ವೀಡಿಶ್ ಬಹುರಾಷ್ಟ್ರೀಯ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಕೇಂಬ್ರಿಡ್ಜ್ ಬಯೋಮೆಡಿಕಲ್ ಕ್ಯಾಂಪಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯು ತನ್ನ ಕೋವಿಡ್ ಲಸಿಕೆಗಳನ್ನು ಪ್ರಪಂಚದಾದ್ಯಂತದ ಮಾರುಕಟ್ಟೆಗಳಿಂದ ಹಿಂಪಡೆಯುತ್ತಿದೆ. ಹೆಚ್ಚುವರಿಯಾಗಿ ಇದು ಯುರೋಪ್ನಲ್ಲಿ ಮಾರ್ಕೆಟಿಂಗ್ ಅನುಮೋದನೆಯನ್ನು ಹಿಂಪಡೆಯಲು ಯೋಜಿಸಿದೆ.
TTS ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ಮಾನವರಲ್ಲಿ ಕಡಿಮೆ ರಕ್ತದ ಪ್ಲೇಟ್‌ಲೆಟ್ ಕಾರಣವಾಗುತ್ತದೆ ಮತ್ತು UK ನಲ್ಲಿ 81 ಕ್ಕೂ ಹೆಚ್ಚು ಸಾವುಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಆದರೆ ಕೋವಿಶೀಲ್ಡ್ ಅನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಅಸ್ಟ್ರಾಜೆನೆಕಾ ಹೇಳಿದೆ.
