
ಸಂಸದ ಅನಂತಕುಮಾರ ಹೆಗಡೆಯವರ ಭಾವಚಿತ್ರವನ್ನು ಅಳವಡಿಸಿ ಅನಂತಕುಮಾರ ಹೆಗಡೆಯವರೇ ಹೇಳಿಕೆ ನೀಡಿದ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಹಾಕಿ, ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ದುರುಪಯೋಗ ಪಡಿಸಿಕೊಂಡು ಗೌರವ ಘನತೆಗೆ ಚ್ಯುತಿ ಬರುವ ಹಾಗೇ ಮಾಡಿದ್ದಾರೆ ಎಂದು ಅನಂತಕುಮಾರ್ ಆಪ್ತ ಸಹಾಯಕ ಸುರೇಶ್ ಶೆಟ್ಟಿಯಿಂದ ಸಿದ್ದಾಪುರದ ಬಿಜೆಪಿ ಕಾರ್ಯಕರ್ತ ಎ.ಜಿ.ನಾಯ್ಕ ವಿರುದ್ಧ ದೂರು ನೀಡಲಾಗಿದೆ.

ಕಾರವಾರ, ಮೇ 06: ತಮ್ಮ ಫೋಟೋ ಬಳಸಿ ಬಿಜೆಪಿಗೆ ವೋಟ್ ಹಾಕುವಂತೆ ಪೋಸ್ಟ್ ಮಾಡಿದವರ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ಅವರು ತಮ್ಮ ಆಪ್ತನ ಮೂಲಕ ದೂರು ದಾಖಲಿಸಿದ್ದಾರೆ. ಅನಂತಕುಮಾರ್ ಆಪ್ತ ಸಹಾಯಕ ಸುರೇಶ್ ಶೆಟ್ಟಿಯಿಂದ ಸಿದ್ದಾಪುರದ ಬಿಜೆಪಿ ಕಾರ್ಯಕರ್ತ ಎ.ಜಿ.ನಾಯ್ಕ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಲಾಗಿದೆ. ಸಂಸದರ ಭಾವಚಿತ್ರ ಬಳಸಿ ಸಂಸದರೇ ಹೇಳಿದ್ದಾರೆ ಎನ್ನುವ ರೀತಿಯಲ್ಲಿ ಪೋಸ್ಟ್ ಹಾಕಿದ ಹಿನ್ನಲೆ ದೂರು ನೀಡಲಾಗಿದೆ.

ದೂರಿನಲ್ಲೇನಿದೆ?
ಎ.ಜಿ ನಾಯ್ಕ, ಸಿದ್ದಾಪುರ ಇವರು ಮೇ 6ರಂದು ಮಧ್ಯಾಹ್ನ 2-20 ಗಂಟೆಗೆ ಬಿಜೆಪಿ ಉತ್ತರ ಕನ್ನಡ ಲೋಕಸಭಾ 2024 ಎಂಬ ವಾಟ್ಸ್ ಆಫ್ ಗ್ರೂಪ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ನನ್ನ ಬಂದು ಬಾಂಧವರೇ, ಮುನ್ನುಗ್ಗಿ ಮುನ್ನುಗ್ಗಿ, ಯಾವುದಕ್ಕೂ ಹೆದರಬೇಡಿ, ಎಲ್ಲಿಯೂ ನಿಲ್ಲಬೇಡಿ. ದೇಶವನ್ನು ಉಳಿಸುವ ಹಾಗೂ ದೇಶದೊಂದಿಗೆ ನಿಲ್ಲುವ ಸದಾವಕಾಶ ನಮ್ಮೆಲ್ಲರಿಗೂ ಮತ್ತೊಮ್ಮೆ ಒದಗಿ ಬಂದಿದೆ. 2014 ಹಾಗೂ 2019 ರಲ್ಲಿ, ಹೇಗೆ ನಾವುಗಳೆಲ್ಲ ದೇಶ ವಿರೋಧಿ ಶಕ್ತಿಯ ವಿರುದ್ಧ ಸೆಟೆದು ನಿಂತೆವೋ ಅದೇ ರೀತಿಯಾಗಿ ಮತ್ತೊಮ್ಮೆ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲುವ ಕಾಲ ಬಂದಿದೆ.

ನಾವೆಲ್ಲರೂ ಪ್ರಧಾನ ಸೇವಕ ನರೇಂದ್ರ ಮೋದಿಯವರ ಬೆನ್ನಿಗೆ ನಿಂತು ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಲೇ ಬೇಕಾಗಿದೆ. ಇದು ನಮಗೋಸ್ಕರ ಅಲ್ಪವಾದರೂ ನಮ್ಮ ಭವಿಷ್ಯದ ನಾಳೆಗಾಗಿ ಭವಿಷ್ಯದ ಭಾರತಕ್ಕಾಗಿ ಇದೇ ಮೇ 07ರಂದು ನಡೆಯುವ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಧ್ವಜವನ್ನು ಹಾರಿಸಬೇಕಿದೆ ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಾಹುಗಳಿಗೆ ಶಕ್ತಿ ನೀಡುವ ಕೆಲಸವಾಗಬೇಕಿದೆ ಎಂದು ಬರೆದು ಅದಕ್ಕೆ ಸಂಸದ ಅನಂತಕುಮಾರ ಹೆಗಡೆಯವರ ಭಾವಚಿತ್ರವನ್ನು ಅಳವಡಿಸಿ ಅನಂತಕುಮಾರ ಹೆಗಡೆಯವರೇ ಹೇಳಿಕೆ ನೀಡಿದ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಹಾಕಿ, ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ದುರುಪಯೋಗ ಪಡಿಸಿಕೊಂಡು ಗೌರವ ಘನತೆಗೆ ಚ್ಯುತಿ ಬರುವ ಹಾಗೇ ಮಾಡಿದ್ದಾರೆ. ಹೀಗಾಗಿ ಅನಂತಕುಮಾರ್ ಹೆಗಡೆ ಸೂಚನೆ ಮೇರೆಗೆ ಅವರ ಬೆಂಬಲಿಗರು ದೂರು ನೀಡಿದ್ದಾರೆ.