
ಮಂಗಳೂರು: ತುಳುನಾಡು ಸತ್ಯ, ಧರ್ಮ, ನಿಷ್ಠೆಯೇ ಈ ನೆಲದ ಅಸ್ಮಿತೆ. -ದೇವಾಲಯಗಳನ್ನೊಂಡ ಈ ನಾಡಿನಲ್ಲಿ ಪರಸ್ಪರ ದ್ವೇಷ, ಅಧರ್ಮವನ್ನು ಕೊನೆಗಾಣಿಸಿ, ಸತ್ಯ ಧರ್ಮ, ಸೌಹಾರ್ದದ ಗೆಲುವಾಗಬೇಕು. ಬಡವರು, ಹಿಂದುಳಿದ ವರ್ಗದವರ ಧ್ವನಿಯಾಗಿದ್ದ ನನಗೆ ಆದ ನೋವು, ಅನ್ಯಾಯ ಇನ್ಯಾರಿಗೂ ಆಗುವುದು ಬೇಡ. ಇದಕ್ಕಾಗಿ ನನ್ನ ಜೀವಿತಾವಧಿಯಲ್ಲೇ ನನ್ನದೇ ಚಿಂತನೆಯ ಶಿಷ್ಯ ಪದ್ಮರಾಜ್ ಆರ್. ಅವರ ಗೆಲುವನ್ನು ಕಣ್ಣಾರೆ ನೋಡುವ ಆಸೆ ನನ್ನದು ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಧಾರ್ಮಿಕ, ಪ್ರವಾಸೋದ್ಯಮದ ನೈಸರ್ಗಿಕ ಸೌಂದರ್ಯದ ಈ ನಾಡು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕಿತ್ತು. ಆದರೆ ಇಲ್ಲಿ ಧರ್ಮ ಎಲ್ಲವನ್ನೂ ಒಡೆದು ಹಾಕಿದೆ. ಇನ್ನೂ ಕಾಲ ಮಿಂಚಿಲ್ಲ. ಈ ಜಿಲ್ಲೆಗೆ ಅಂಟಿಕೊಂಡ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಹೋಗಬೇಕು. ಅಧರ್ಮದ ಅಪಪ್ರಚಾರವನ್ನು ಮೆಟ್ಟಿ ನಿಂತು, ಜನರು ಸತ್ಯ-ಧರ್ಮವನ್ನು ಗೆಲ್ಲಿಸಬೇಕಾಗಿದೆ. ಪದ್ಮರಾಜ್ ಆರ್. ಅವರ ಗೆಲುವು ಮೂಲಕ ಯು. ಶ್ರೀನಿವಾಸ ಮಲ್ಯರು ಹಾಗೂ ಈ ನಾಡಿನ ಜನತೆಯ ಅಭಿವೃದ್ಧಿಯ ಕನಸಿಗೆ ಚೈತನ್ಯ ಸಿಗಲಿ ಎಂದವರು ಹೇಳಿದ್ದಾರೆ.

ಭೂಮಿ ಒಡೆತನ ನೀಡಿದ್ದು ಕಾಂಗ್ರೆಸ್’
ದ.ಕ. ಜಿಲ್ಲೆಗೆ ಬಂದರು, ವಿಮಾನಯಾನ, ರೈಲು, ರಸ್ತೆ ಸಾರಿಗೆ ನೀಡಿದ್ದು ಕೇಂದ್ರದ ಕಾಂಗ್ರೆಸ್ ಸರಕಾರ. ಭೂ ಮಸೂದೆ ಕಾಯ್ದೆ ಜಾರಿ ಮೂಲಕ ಈ ನಾಡಿನ ಶೇ. 80ರಷ್ಟು ಮಂದಿ ಭೂಮಿಯ ಒಡೆಯರಾದರು. ಈಗಿನವರಿಗೆ ಅದು ನೆನಪಿಲ್ಲ. ಹಿಂದುತ್ವದ ವಿಷಯದಲ್ಲಿ ತೇಲಾಡುವವರು ಸ್ವಲ್ಪ ಹಿರಿಯರಿಂದ ಈ ಬಗ್ಗೆ ತಿಳಿದಿಕೊಳ್ಳುವುದು ಉತ್ತಮ. 80 ವರ್ಷಗಳಲ್ಲಿ ಏನಾಗಿದೆ ಕೇಳುವವರು ಕಳೆದ 33 ವರ್ಷಗಳಲ್ಲಿ ಈ ರೀತಿಯ ಒಂದು ಕೊಡುಗೆ ಬಂದ ಉದಾಹರಣೆ ನೀಡಲಿ. ಹೀಗಾಗಿ ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಈ ಜಿಲ್ಲೆಯಲ್ಲಿಯೇ ಶಾಶ್ವತವಾಗಿ ನಮ್ಮ ಕಣ್ಣ ಮುಂದಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ಕಾರ್ಪೊರೇಟ್ ಕಂಪೆನಿ ಸಾಲ ಮನ್ನಾ ಅಭಿವೃದ್ಧಿಯಲ್ಲ’
ಮೋದಿ ಅಲೆ ಎನ್ನುವಂತಹುದು ಭ್ರಮೆ. ಜನರಿಗೆ ಈಗ ಸತ್ಯದ ಅರಿವಾಗಿದೆ. 10 ವರ್ಷಗಳ ಹಿಂದೆ ನೀಡಿದ ಭರವಸೆಗಳನ್ನು ಜನರು ಒಮ್ಮೆ ಯೋಚಿಸಬೇಕಾಗಿದೆ. ಕಪ್ಪು ಹಣ ಬಂದಿದೆಯಾ? ಉದ್ಯೋಗ ಸಮಸ್ಯೆ ನಿವಾರಣೆ ಆಗಿದೆಯಾ? ಮೋದಿ ಅವರ ಇಂತಹ ಆಶ್ವಾಸನೆಯ ಪಟ್ಟಿ ಹೇಳಿದರೆ ನೂರಾರು ಇದೆ. ನನ್ನ ಸಾಲ ಮೇಳದಂತಹ ಒಂದು ಯೋಜನೆ ಮೋದಿ ಕೊಟ್ಟಿದ್ದಾರಾ? ಅಭಿವೃದ್ಧಿ ಅಂದರೆ ಕಾರ್ಪೊರೇಟ್ ಕಂಪೆನಿಗಳ ಸಾಲ ಮನ್ನಾ ಅಲ್ಲ. ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವಂತಾಗಬೇಕು. ಆಗ ಮಾತ್ರ ದೇಶದ ಜನಸಾಮಾನ್ಯ, ಮಧ್ಯಮ ವರ್ಗದ ಅಭಿವೃದ್ಧಿ ಸಾಧ್ಯ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಅದಕ್ಕೆ ಪೂರಕವಾಗಿದೆ ಎಂದವರು ತಿಳಿಸಿದ್ದಾರೆ.

ಪದ್ಮರಾಜ್ ಧಾರ್ಮಿಕ ಕ್ಷೇತ್ರದ ಅನುಭವಿ ನಾಯಕ
ಹಿಂದೂ ಅಂದರೆ ಮಾನವ, ಮಾನವೀಯತೆಯ ಧರ್ಮ. ಮಾನವೀಯತೆಗಿಂತಲೂ ಮಿಗಿಲಾದ ಧರ್ಮವಿಲ್ಲ. ದ.ಕ. ಕಾಂಗ್ರೆಸ್ ಅಭ್ಯರ್ಥಿ ಯಾಗಿರುವ ಪದ್ಮರಾಜ್ ಆರ್. ಅದನ್ನು ಚೆನ್ನಾಗಿ ಪಾಲನೆ ಮಾಡುತ್ತಿದ್ದಾರೆ. ಆ ಕಾರಣದಿಂದಲೇ ಅವರ ಇಮೇಜ್ ಈಗ ಎರಡು ಪಾಲು ಹೆಚ್ಚಾಗಿದೆ. ದೈವಸ್ಥಾನ-ದೇವಸ್ಥಾನ, ಧಾರ್ಮಿಕ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡ ಅನುಭವವಿದೆ. ಹಿಂದೂ ಧರ್ಮ ಮತ್ತು ಹಿಂದುತ್ವಕ್ಕೆ ವ್ಯತ್ಯಾಸ ವಿದೆ. ಸುಮಾರು 2 ದಶಕಗಳ ಹಿಂದೆ ಸೌಹಾರ್ದ, ಸಹಬಾಳ್ವೆ ಈ ನೆಲದಲ್ಲಿತ್ತು. ನಮ್ಮ ಹಿರಿಯರು ನೆರೆಹೊರೆಯವರನ್ನೇ ಬಂಧು ಎನಿಸಿಕೊಂಡಿ ದ್ದರು. ಆದರೆ ಆ ಸಂಬಂಧವನ್ನು ಧರ್ಮದ ನೆಪದಲ್ಲಿ ಒಡೆದು ಹಾಕಿ, ಅಧರ್ಮವನ್ನು ವೈಭವೀಕರಿಸ ಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಈಗಿನವರು ಹೊಲಸು ಕೆಲಸವನ್ನು ಮಾಡುವಂತಾಗಿದೆ. ಇದನ್ನು ನೋಡಿದಾಗ ಮನಸ್ಸಿಗೆ ದುಃಖವಾಗುತ್ತದೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

