
ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಎರಡೂ ಪಕ್ಷ ಬಿರುಸಿನ ಪ್ರಚಾರದಲ್ಲಿ ತೊಡಗಿದೆ. ಈ ಬಾರಿ ನೇರ ಸ್ಪರ್ಧೆ ಇರುವುದರಿಂದ ಬಾರಿ ಕುತೂಹಲದ ಕಣವಾಗಿ ಜಿಲ್ಲೆ ಮಾರ್ಪಟ್ಟಿದೆ. ಸದ್ಯದ ಕಾವು ನೋಡುವುದಾದರೆ ಜಾತಿ ರಾಜಕೀಯ ಮೆಲೈಸುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಯಾರು ಗೆದ್ದರೂ ಈ ಬಾರಿ ಅಲ್ಪ ಮತದ ಅಂತರ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ

ಜಿಲ್ಲೆಗೆ ಸಂಬಂಧಿಸಿ ಯಾವುದೇ ಚಟುವಟಿಕೆ ಮಂಗಳೂರು ದಕ್ಷಿಣದಲ್ಲೇ ನಡೆಯುವುದರಿಂದ ರಾಜಕೀಯ ಹಾರ್ಟ್‌ಸಿಟಿ ಇದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಡೆಸಿದ ರೋಡ್ ಶೋ “ದಕ್ಷಿಣ’ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದಂತಿದೆ. . ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯೂ ರಾಜಕೀಯವಾಗಿ ಹೊಸ ಅಧ್ಯಾಯ ರೂಪಿಸಿದೆ.ಇಷ್ಟಿದ್ದರೂ ಇಲ್ಲಿ ಮತದಾರರು ಚುನಾವಣೆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಂಡಂತೆ ಕಾಣುವುದಿಲ್ಲ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಹೊಸ ಮುಖಗಳು ಕಣಕ್ಕಿಳಿದಿದ್ದು ಚುನಾವಣಾ ಬಿಸಿಯೇರತೊಡಗಿದೆ. ಬಿಜೆಪಿಯಿಂದ ಕ್ಯಾ.ಬ್ರಜೇಶ್ ಚೌಟ, ಕಾಂಗ್ರೆಸ್ನಿಂದ ಪದ್ಮರಾಜ್ ಪೂಜಾರಿ ಸ್ಪರ್ಧಿಸಿದ್ದು ಈ ಬಾರಿ ಯಾರೇ ಗೆದ್ದರೂ ಹೊಸ ವ್ಯಕ್ತಿ ಸಂಸತ್ ಪ್ರವೇಶಿಸಲಿದ್ದಾರೆ.
ಏಪ್ರಿಲ್ 26ರಂದು ನಡೆಯಲಿರುವ ಮೊದಲ ಹಂತದ ಲೋಕ ಕದನಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಜ್ಜಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಭಾರೀ ಪ್ರಚಾರದಲ್ಲಿ ನಿರತವಾಗಿವೆ. ಜಿಲ್ಲೆಯಲ್ಲಿ ಉಭಯ ಪಕ್ಷಗಳ ನಡುವೆ ಸಮಬಲದ ಹೋರಾಟವೂ ಕಾಣಿಸುತ್ತಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಜಿಲ್ಲೆ ಕಳೆದ ಮೂರುವರೆ ದಶಕಗಳಿಂದ ಬಿಜೆಪಿ ಭದ್ರಕೋಟೆ. ಹಿಂದುತ್ವ ದಿಂದ, ಮುಸ್ಲಿಮರನ್ನು ವಿರೋಧಿಸಿ ಭಾಷಣ ಮಾಡಿ ಸಂಘಟನಾತ್ಮಕವಾಗಿ ಪ್ರಬಲವಾಗಿ ನೆಲೆಯೂರಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ 33 ವರ್ಷಗಳಿಂದ ನಿರಂತರವಾಗಿ ಗೆಲ್ಲುತ್ತಾ ಬಂದಿದೆ. ಜಿಲ್ಲೆಯು ಬಿಜೆಪಿಗೆ ಸುಲಭ ತುತ್ತೆಂಬ ಮಾತಿದೆ. ಆದರೆ, ಈ ಬಾರಿಯ ಚುನಾವಣಾ ಅಖಾಡದಲ್ಲಿ ಕ್ಷೇತ್ರ ಬಿಜೆಪಿ ಗೆ ಸುಲಭವಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.ಜಿಲ್ಲೆಯಲ್ಲಿ ಬಿಲ್ಲವರು, ಮುಸ್ಲಿಮರು ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ, ಈ ವಿದ್ಯಾಮಾನ ಬಿಜೆಪಿ ಗೆ ಹಿನ್ನಡೆ ಎನ್ನಲಾಗುತ್ತಿದೆ

ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಈ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಬಳಿಕ ಅಭ್ಯರ್ಥಿಗಳು ಬದಲಾದರೂ ಕ್ಷೇತ್ರದಲ್ಲಿ ಗೆಲುವು ಕಾಣಲಾಗಿರಲಿಲ್ಲ. ವೀರಪ್ಪ ಮೊಯ್ಲಿ, ಮಿಥುನ್ ರೈ ಅಭ್ಯರ್ಥಿಗಳಾಗಿ ಪರಾಭವಗೊಂಡಿದ್ದರು. ಕಾಂಗ್ರೆಸ್ ಪ್ರಬಲ ನಾಯಕರಾಗಿದ್ದರೂ ಕ್ಷೇತ್ರವನ್ನು ಗೆಲ್ಲಲು ಇವರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಕಳೆದ ವರ್ಷವಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದ ಪದ್ಮರಾಜ್ ಪೂಜಾರಿಯನ್ನು ಈ ಬಾರಿ ಅಭ್ಯರ್ಥಿ ಮಾಡಿದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಮೂಡಿಸಿದೆ. ನಿರೀಕ್ಷೆಯಂತೆ ಬಿಜೆಪಿಯಿಂದ ಹೊಸ ಮುಖ ಕ್ಯಾ.ಬ್ರಜೇಶ್ ಚೌಟ ಕಣಕ್ಕಿಳಿದಿದ್ದಾರೆ. ಎರಡೂ ಪಕ್ಷಗಳಿಂದ ಹೊಸ ಮುಖಗಳು ಕಣದಲ್ಲಿರುವುದರಿಂದ ಕ್ಷೇತ್ರದ ಕುತೂಹಲ ತುಸು ಹೆಚ್ಚಾಗಿಯೇ ಇದೆ. ಇವರಿಬ್ಬರಿಗೂ ಇದು ಮೊದಲ ಚುನಾವಣೆ. ಹಾಗಾಗಿ ಸಹಜವಾಗಿ ಇಬ್ಬರು ಎರಡೂ ಪಕ್ಷಗಳಲ್ಲಿ ಹೊಸ ಆಶಾಭಾವನೆ ಹುಟ್ಟುಹಾಕಿದ್ದಾರೆ.

ಬಿಲ್ಲವ ಟ್ರಂಪ್ ಕಾರ್ಡ್
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಲ್ಲವ ಮತ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತದೆ ಎಂಬುದು ಕೈ ಮುಖಂಡರ ವಿಶ್ವಾಸ. ಆದರೆ ಹಿಂದುತ್ವ ವನ್ನು ನಂಬಿರುವ ಬಿಲ್ಲವರು ಬಿಜೆಪಿ ಯ ಕೈ ಬಿಡುವುದಿಲ್ಲ ಎಂದು ಬಿಜೆಪಿ ಗರು ನಂಬಿದ್ದಾರೆ
ಪದ್ಮರಾಜ್ ಪೂಜಾರಿ ಬಿಲ್ಲವ ನಾಯಕ . ಬಿಲ್ಲವ ಸಮಾಜದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವವರು. ಇವರನ್ನು ಅಭ್ಯರ್ಥಿ ಮಾಡಿದ ಬಳಿಕ ಬಿಲ್ಲವ ಬೆಂಬಲ ವಿಚಾರ ಮುನ್ನೆಲೆಗೆ ಬಂದಿದೆ. ಜನಾರ್ದನ ಪೂಜಾರಿ ಬಳಿಕ ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವರು ಗೆದ್ದು ಬರಲಿಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಲ್ಲವರಿದ್ದರೂ ಕಳೆದ 33 ವರ್ಷಗಳಲ್ಲಿ ಬಿಜೆಪಿಯಿಂದ ಜೈನ ಸಮುದಾಯದ ಧನಂಜಯಕುಮಾರ್, ಗೌಡ ಸಮುದಾಯದ ಸದಾನಂದಗೌಡ, ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲ್ ಜಯಗಳಿಸಿದ್ದಾರೆ. ಆದರೆ, ಈ ಬಾರಿ ಬಿಲ್ಲವ ಮುಖಂಡ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದ ಬಿಲ್ಲವ ಸಮುದಾಯ ಪದ್ಮರಾಜ್ ಗೆಲ್ಲಿಸಲು ಬಿಜೆಪಿಯಿಂದ ಕಾಂಗ್ರೆಸ್ ಕಡೆಗೆ ಶಿಪ್ಟ್ ಆಗಲಿದ್ದಾರೆ ಎಂಬ ಆಶಾ ಭಾವನೆ ಕಾಂಗ್ರೆಸ್ ಪಾಳಯದಲ್ಲಿದೆ. ಇದಕ್ಕೆ ಪೂರಕವಾಗಿ ಜನಾರ್ದನ ಪೂಜಾರಿ ಚುನಾವಣೆಗೆ ಸ್ಪರ್ಧಿಸಿದಾಗಲೂ ಒಟ್ಟಾಗಿರದ ಬಿಲ್ಲವ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಘಟನೆಗಳು ಈ ಬಾರಿ ಒಗ್ಗಟ್ಟಾಗಿ ಪದ್ಮರಾಜ್ ಪರ ಕಾರ್ಯನಿರ್ವಹಿಸುತ್ತಿದೆ.

ಯಾರು ಗೆದ್ದರೂ ಜಿಲ್ಲೆಯಲ್ಲಿ ಕೋಮುವಾದ ಕೊನೆಗೊಂಡು ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಲಿ ಎಂದು ಜನರ ಆಶಾ ಭಾವನೆ.