
Farmers Protest: ಪಂಜಾಬ್ನ ಪಟಿಯಾಲ ಜಿಲ್ಲೆಯ ಶಂಭು ರೈಲ್ವೆ ನಿಲ್ದಾಣದಲ್ಲಿ ಹಳಿಗಳ ಮೇಲೆ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಂಬಾಲಾ-ಅಮೃತಸರ ಮಾರ್ಗದ ಒಟ್ಟು 54 ರೈಲು ಸಂಚಾರವನ್ನು ಶನಿವಾರ ರದ್ದುಗೊಳಿಸಲಾಗಿದೆ. ಹರಿಯಾಣ ಪೊಲೀಸರು ಬಂಧಿಸಿರುವ ಮೂವರು ರೈತರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಈ ಹೋರಾಟ ಕೈಗೊಂಡಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿಈ ಹೋರಾಟ ನಡೆಯುತ್ತಿದೆ.

ಚಂಡಿಗಢ: ನಿರಂತರ 4 ದಿನಗಳಿಂದ ಪಂಜಾಬ್ನ ಪಟಿಯಾಲ ಜಿಲ್ಲೆಯ ಶಂಭು ರೈಲ್ವೆ ನಿಲ್ದಾಣ (Shambhu railway station)ದಲ್ಲಿ ಹಳಿಗಳ ಮೇಲೆ ರೈತರು ಪ್ರತಿಭಟನೆ (Farmers Protest) ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಂಬಾಲಾ-ಅಮೃತಸರ (Ambala-Amritsar) ಮಾರ್ಗದ ಒಟ್ಟು 54 ರೈಲು ಸಂಚಾರವನ್ನು ಶನಿವಾರ ರದ್ದುಗೊಳಿಸಲಾಗಿದೆ. ಹರಿಯಾಣ ಪೊಲೀಸರು ಬಂಧಿಸಿರುವ ಮೂವರು ರೈತರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಈ ಹೋರಾಟ ಕೈಗೊಂಡಿದ್ದಾರೆ. ನವದೆಹಲಿ-ಅಮೃತಸರ, ಹೃಷಿಕೇಶ- ಶ್ರೀ ಗಂಗಾನಗರ ಮತ್ತು ಲುಧಿಯಾನ-ಅಂಬಾಲಾ ಕಂಟೋನ್ಮೆಂಟ್ ರೈಲು ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟಿಯಾಲಾದ ಶಂಭುವಿನಲ್ಲಿ ರೈತರು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಬಗ್ಗೆ ಮಾತನಾಡಿದ ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್, ʼʼಮೂವರು ರೈತರನ್ನು ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆʼʼ ಎಂದು ಘೋಷಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡಲು ನಿರಾಕರಿಸಿದ ರೈತ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ʼʼಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾರಿಗೆ ಮತ ಚಲಾಯಿಸಬೇಕು ಎಂದು ಯಾರಿಗೂ ಹೇಳುವುದಿಲ್ಲ. ಈಗಾಗಲೇ ರೈತರು ಯಾವ ಪಕ್ಷ ಅಥವಾ ಅಭ್ಯರ್ಥಿ ಉತ್ತಮ ಎನ್ನುವುದನ್ನು ಕಂಡುಕೊಂಡಿದ್ದಾರೆʼʼ ಎಂದು ಹೇಳಿದ್ದಾರೆ.
ʼʼಈ ಪ್ರತಿಭಟನೆ ಕಾರಣದಿಂದ ಮೂರು ದಿನಗಳಿಂದ ಸುಮಾರು 380 ರೈಲುಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 13ರಂದು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿಗಳಲ್ಲಿ ಭದ್ರತಾ ಪಡೆಗಳು ರೈತರ ಮೆರವಣಿಗೆಯನ್ನು ನಿಲ್ಲಿಸಿದಾಗಿನಿಂದ ಅವರು ಅಲ್ಲಿಯೇ ಉಳಿದಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ನವದೀಪ್ ಜಲ್ಬೆರಾ, ಗುರ್ಕಿರತ್ ಶಹಪುರ್ ಮತ್ತು ಅನೀಶ್ ಖಟ್ಕರ್ ಎಂಬ ಮೂವರು ರೈತರನ್ನು ಭದ್ರತಾ ಪಡೆಗಳು ಬಂಧಿಸಿವೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಫೆಬ್ರವರಿ 13ರಂದು ದಾಖಲಾದ ಕೊಲೆ ಯತ್ನ ಪ್ರಕರಣದಲ್ಲಿ ನವದೀಪ್ ಮತ್ತು ಗುರ್ಕೀರತ್ ಅವರನ್ನು ಫೆಬ್ರವರಿ 28ರಂದು ಮೊಹಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಂಧಿಸಲಾಗಿದ್ದರೆ, ಅನೀಶ್ ಖಟ್ಕರ್ ಅವರನ್ನು ಮಾರ್ಚ್ 19ರಂದು ಹರಿಯಾಣ ಪೊಲೀಸರು ಬಂಧಿಸಿದ್ದರು. ಅನೀಶ್ ಖಟ್ಕರ್ ಬಂಧನವಾದಾಗಿನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಮತ್ತು ಅವರ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆ ʼದೆಹಲಿ ಚಲೋ’ ಮೆರವಣಿಗೆಯನ್ನು ನಡೆಸುತ್ತಿದೆ. ಪಂಜಾಬ್- ಹರಿಯಾಣ ಗಡಿಯಲ್ಲಿ ರೈತರ ಪ್ರತಿಭಟನೆ ವೇಳೆ ಈ ವರ್ಷದ ಫೆಬ್ರವರಿಯಲ್ಲಿ 22 ವರ್ಷದ ರೈತ ಶುಭಕರನ್ ಸಿಂಗ್ ಮೃತಪಟ್ಟಿದ್ದರು.