

ಮಂಡ್ಯ: ದಿನದಿಂದ ದಿನಕ್ಕೆ ಲೋಕಸಭೆ ಚುನಾವಣೆ ರಂಗೇರುತ್ತಿದೆ. ಕಳೆದ ಬಾರಿ ಹಾಲಿ ಸಂಸದೆ ಸುಮಲತಾ ಪರ ಪ್ರಚಾರಕ್ಕೆ ನಟ ದರ್ಶನ್ ಅವರು ಕಣಕ್ಕೆ ಇಳಿದಿದ್ದರು. ಆದರೆ ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪ್ರಚಾರಕ್ಕೆ ಇಳಿಸಿ ದಳಪತಿ ಮಣಿಸಲು ಕೈ ಪಡೆ ಮತ್ತೊಂದು ರಣತಂತ್ರ ಮಾಡಿದೆ.


ಹೌದು, ಲೋಕಸಭೆ ಮತದಾನ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಸ್ಟಾರ್ ನಟನ ಮೂಲಕ ಯುವ ಮತವನ್ನು ಪಡೆಯಲು ಮತಬೇಟೆಗೆ ತಯಾರಿ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಅಖಾಡಕ್ಕೆ ನಟ ದರ್ಶನ್ ಧುಮುಕಲಿದ್ದಾರಂತೆ. ಹೀಗಾಗಿ ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋಗೆ ಭರ್ಜರಿ ತಯಾರಿ ನಡೆಸಲಾಗಿದೆಯಂತೆ.


ಇನ್ನು, ಕಳೆದ ಬಾರಿ ಸುಮಲತಾ ಬೆನ್ನಿಗೆ ನಿಂತಿದ್ದ ದರ್ಶನ್ ಅವರು ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ನಡೆಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಕ್ಯಾಂಪೇನ್ ನಡೆಸಲಿದ್ದಾರಂತೆ. ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೂ ಮಳವಳ್ಳಿಯಲ್ಲಿ ರೋಡ್ ಶೋ ನಡೆಸಲಿದ್ದಾರಂತೆ. ಹಲಗೂರು, ಹಾಡ್ಲಿ ಸರ್ಕಲ್, ಮಳವಳ್ಳಿ ಟೌನ್, ಬೆಳಕವಾಡಿ, ಬಿ.ಜಿ.ಪುರ, ಪೂರಿಗಾಲಿ, ಕಿರುಗಾವಲು, ಟಿ.ಕಾಗೇಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರಂತೆ.
