
Supreme Court on EVM vs Ballot Paper: ಇವಿಎಂ ಮೆಷೀನ್ ಮೇಲೆ ಜನರಿಗೆ ವಿಶ್ವಾಸ ಕಡಿಮೆ ಆಗಿದೆ. ವಿವಿಪ್ಯಾಟ್ಗಳಿಂದ ಬರುವ ಸ್ಲಿಪ್ ಅನ್ನು ಮತದಾರನು ಬ್ಯಾಲಟ್ ಬಾಕ್ಸ್ಗೆ ಹಾಕುವಂತಹ ವ್ಯವಸ್ಥೆಯನ್ನು ತರಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿಲ್ಲ. ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ಎಂಬುದು ತಮಗೆಲ್ಲಾ ತಿಳಿದಿದೆ. ಯೂರೋಪ್ನಲ್ಲಿ ಇರುವ ವ್ಯವಸ್ಥೆ ಭಾರತಕ್ಕೆ ಸರಿಹೊಂದಬೇಕೆಂದಿಲ್ಲ ಎಂದು ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ

ನವದೆಹಲಿ, ಏಪ್ರಿಲ್ 16: ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬಂದ ಬಳಿಕ ಮತ ಎಣಿಕೆ ಪ್ರಕ್ರಿಯೆ (votes counting) ಸುಗಮಗೊಂಡಿದೆ. ಆದರೆ, ತಂತ್ರಜ್ಞಾನವನ್ನು ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಳೆದ 10 ವರ್ಷಗಳಿಂದಲೂ ವಿಪಕ್ಷಗಳು ಆರೋಪಿಸುತ್ತಿವೆ. ಇವಿಎಂ ಬದಲು ಹಳೆಯ ಬ್ಯಾಲಟ್ ಬಾಕ್ಸ್ ಮತದಾನ ಪದ್ಧತಿಯನ್ನೇ ವಾಪಸ್ ತರಬೇಕೆಂಬ ಒತ್ತಾಯಗಳು ಇವೆ. ಇದೇ ವೇಳೆ, ಇವಿಎಂ ಮೆಷೀನ್ನಲ್ಲಿ (EVM) ಮಾಡಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್ಗಳ (VVPAT slips) ಮೂಲಕ ಪರಿಶೀಲನೆ ನಡೆಸುವಂತಹ ವ್ಯವಸ್ಥೆ ಆಗಬೇಕು ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿಗಳು ಸಲ್ಲಿಕೆ ಆಗಿವೆ. ಇದರ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ (Supreme court), ಹಿಂದಿನ ಬ್ಯಾಲಟ್ ವೋಟಿಂಗ್ ವಿಧಾನದ ಲೋಪವನ್ನು ಎತ್ತಿತೋರಿಸಿದೆ.

ನಾವೆಲ್ಲಾ ಈಗ 60 ವರ್ಷ ವಯಸ್ಸು ದಾಟಿದವರಿದ್ದೇವೆ. ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ಎಂದು ನಮಗೆಲ್ಲಾ ಗೊತ್ತಿದೆ. ನಿಮಗೆ ಅದು ಮರೆತುಹೋಗಿರಬಹುದು, ಆದರೆ, ನಾವು ಮರೆತಿಲ್ಲ,’ ಎಂದು ನ್ಯಾಯಪೀಠದಲ್ಲಿದ್ದ ನ್ಯಾ| ಸಂಜೀವ್ ಖನ್ನ ಹೇಳಿದ್ದಾರೆ. ಹೆಚ್ಚಿನ ಯೂರೋಪಿಯನ್ ದೇಶಗಳು ಇವಿಎಂ ಬದಲು ಬ್ಯಾಲಟ್ ಪೇಪರ್ ಮತದಾನ ವಿಧಾನವನ್ನು ಮರಳಿ ಆಯ್ಕೆ ಮಾಡಿಕೊಂಡಿರುವ ಸಂಗತಿಯನ್ನು ಉಲ್ಲೇಖಿಸಿ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಮುಂದಿಟ್ಟಿದ್ದ ವಾದಕ್ಕೆ ನ್ಯಾಯಮೂರ್ತಿಗಳು ಈ ಉತ್ತರ ನೀಡಿದರು.

ಇವಿಎಂ ವಿಧಾನದ ವಿರುದ್ಧ ಸಲ್ಲಿಸಲಾದ ಹಲವು ಅರ್ಜಿಗಳಲ್ಲಿ ಎಡಿಆರ್ (ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಒಂದು. ಎಡಿಆರ್ ಪರ ಪ್ರಶಾಂತ್ ಭೂಷಣ್ ವಕಾಲತು ವಹಿಸಿ, ಮತಪತ್ರದ ಮೂಲಕ ಮತದಾನ ಮಾಡುವ ಪದ್ಧತಿ ಮರಳಬೇಕು ಎಂದು ವಾದಿಸುತ್ತಿದ್ದರು.
‘ನಾವು ಪೇಪರ್ ಬ್ಯಾಲಟ್ಗೆ ಮರಳಬಹುದು. ವಿವಿಪ್ಯಾಟ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಆಯ್ಕೆ. ಮೆಷಿನ್ನಿಂದ ಹೊರಬರುವ ಪೇಪರ್ ಸ್ಲಿಪ್ ಅನ್ನು ಮತದಾರರು ಬ್ಯಾಲಟ್ ಬಾಕ್ಸ್ಗೆ ಹಾಕಬಹುದು,’ ಎಂದು ಪ್ರಶಾಂತ್ ಭೂಷಣ್ ಅವರು ಜರ್ಮನಿಯ ಉದಾಹರಣೆ ನೀಡಿದರು.

ಮತ್ತೊಬ್ಬ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, ಇವಿಎಂಗಳಲ್ಲಿ ಹಾಕಲಾದ ಮತಗಳನ್ನು ವಿವಿಪ್ಯಾಟ್ಗಳೊಂದಿಗೆ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು. ಈ ವಾದವನ್ನು ನ್ಯಾಯಮೂರ್ತಿಗಳು ಪರಸ್ಕರಿಸಲಿಲ್ಲ.
‘60 ಕೋಟಿ ವಿವಿಪ್ಯಾಟ್ ಸ್ಲಿಪ್ಗಳನ್ನು ಎಣಿಸಬೇಕಾಗುತ್ತದೆ, ಅಲ್ಲವೇ? ಮನುಷ್ಯನೇ ಎಣಿಕೆ ಮಾಡುತ್ತಾನಾದ್ದರಿಂದ ಪಕ್ಷಪಾತಿತನ, ಮಾನವ ಸಹಜ ದೌರ್ಬಲ್ಯ ಬರಬಹುದು. ಮನುಷ್ಯನ ಹಸ್ತಕ್ಷೇಪ ಇಲ್ಲದೆ ಯಂತ್ರಗಳು ನಿಖರ ಫಲಿತಾಂಶ ಕೊಡುತ್ತವೆ. ಮೆಷೀನ್ ಅಥವಾ ಸಾಫ್ಟ್ವೇರ್ನಲ್ಲಿ ಮನುಷ್ಯನ ಹಸ್ತಕ್ಷೇಪ ಆದಾಗ ಮಾತ್ರ ಸಮಸ್ಯೆ ಉದ್ಭವ ಆಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಬಳಿ ಸಲಹೆ ಇದ್ದರೆ ಕೊಡಿ,’ ಎಂದು ನ್ಯಾ| ಸಂಜೀವ್ ಖನ್ನಾ ಹೇಳಿದರು.
