
ಇಸ್ರೇಲ್-ಇರಾನ್ ಯುದ್ಧದಿಂದ ಪೆಟ್ರೋಲ್ ಮೇಲೆ ಪರಿಣಾಮ
ಇಸ್ರೇಲ್-ಇರಾನ್ ಯುದ್ಧದ ಕಾರ್ಮೋಡ ಕವಿದಿರುವುದು ಗಲ್ಫ್ ರಾಷ್ಟ್ರಗಳಲ್ಲಿ. ಇರಾನ್ ಪ್ರಮುಖ ಪೆಟ್ರೋಲಿಯಂ ದೇಶ. ಪೂರ್ಣ ಯುದ್ಧ ಆರಂಭವಾದರೆ ಇತರ ತೈಲ ರಾಷ್ಟ್ರಗಳೂ ಭಾಗಿಯಾಗಬಹುದು. ಅದೇನೇ ಆದರೂ ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 90 ಡಾಲರ್ ಇದ್ದದ್ದು ಬಹಳ ಶೀಘ್ರದಲ್ಲಿ 100 ಡಾಲರ್ ಗಡಿ ದಾಟುವ ಸಾಧ್ಯತೆ ಹೆಚ್ಚಿದೆ. ಇದಾದರೆ ಪೆಟ್ರೋಲ್, ಡೀಸಲ್ ಬೆಲೆಗಳೂ ಏರಲಿವೆ.

ಹಣದುಬ್ಬರ ಹೆಚ್ಚುವ ಸಾಧ್ಯತೆ
ಪೆಟ್ರೋಲ್ ಬೆಲೆ ಹೆಚ್ಚಾದರೆ ಸಹಜವಾಗಿ ವಿವಿಧ ವಸ್ತುಗಳ ಬೆಲೆ ಏರಿಕೆ ಆಗಬಹುದು. ಅದರ ಪರಿಣಾಮವಾಗಿ ಹಣದುಬ್ಬರ ಹೆಚ್ಚುವ ಸಾಧ್ಯತೆ ಇರುತ್ತದೆ. ಸೆಂಟ್ರಲ್ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಚಿನ್ನದ ಬೆಲೆ ಹೆಚ್ಚುವ ಸಾಧ್ಯತೆ
ಪ್ರಪಂಚದಲ್ಲಿ ಯಾವುದಾದರೂ ವಿಘಟನೆ ನಡೆದಾಗ ಬಹಳಷ್ಟು ಹೂಡಿಕೆದಾರರು ಜಾಗೃತಗೊಳ್ಳುತ್ತಾರೆ. ತಮ್ಮ ಹೂಡಿಕೆ ನಾಶವಾಗದಂತೆ ಸುರಕ್ಷಿತ ಜಾಗದಲ್ಲಿ ಇರಿಸುತ್ತಾರೆ. ಸದ್ಯ ಅತ್ಯಂತ ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಪರಿಗಣಿಸಲಾಗುತ್ತದೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಪರಿಣಾಮವಾಗಿ ಈಗಾಗಲೇ ಹೆಚ್ಚಿನ ಮಟ್ಟದಲ್ಲಿರುವ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗಬಹುದು.

ಷೇರು ಮಾರುಕಟ್ಟೆ ಮೇಲೇನು ಪರಿಣಾಮ?
ಇಸ್ರೇಲ್-ಇರಾನ್ ಸಂಘರ್ಷದ ಬಳಿಕ ಅಮೆರಿಕದ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಆದರೆ, ಇಸ್ರೇಲ್ನ ಟೆಲ್ ಅವಿವ್ ಷೇರು ಮಾರುಕಟ್ಟೆಯಲ್ಲಿ ಅಷ್ಟೇನೂ ವ್ಯತ್ಯಯವಾಗಿಲ್ಲ. ಅಮೆರಿಕದ ನಡೆ ಏನು ಎಂಬುದರ ಮೇಲೆ ಜಗತ್ತಿನ ಷೇರು ಮಾರುಕಟ್ಟೆಗಳು ವರ್ತನೆ ತೋರಬಹುದು. ಭಾರತದ ಮಾರುಕಟ್ಟೆಯಲ್ಲಿ ಅಷ್ಟೇನೂ ವ್ಯತ್ಯಯವಾಗುವ ಸಾಧ್ಯತೆ ಕಡಿಮೆ.

ಭಾರತದ ಮೇಲೇನು ಪರಿಣಾಮ?
ಇಸ್ರೇಲ್-ಇರಾನ್ ಯುದ್ಧದಿಂದ ಭಾರತದ ಮೇಲೆ ಸದ್ಯದ ಮಟ್ಟಿಗೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಎಂದು ಪರಿಣಿತರು ಹೇಳುತ್ತಾರೆ. ಪೆಟ್ರೋಲ್ ದುಬಾರಿಯಾಗಿ ಅದರಿಂದ ಹಣದುಬ್ಬರ ಹೆಚ್ಚಬಹುದು. ಆದರೆ, ಆರ್ಥಿಕತೆಯ ಮುಖ್ಯಭಾಗವು ಆರೋಗ್ಯಯುತವಾಗಿರುವುದರಿಂದ ಸೀಮಿತ ಅವಧಿಯವರೆಗೆ ಭಾರತದ ಆರ್ಥಿಕತೆ ಈ ತಾಪವನ್ನು ತಡೆದುಕೊಳ್ಳಬಲ್ಲುದು.